ಕಿವೀಸ್ ಕಾಪಾಡಿದ ಕೇನ್
ಕಿಂಗ್ಸ್ಟನ್: ಆಕರ್ಷಕ ಶತಕ ದಾಖಲಿಸಿದ ಆರಂಭಿಕ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್,ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದ್ದು, ತಂಡವನ್ನು ಸುಸ್ಥಿತಿಗೆ ಕೊಂಡೊಯ್ದಿದ್ದಾರೆ.
ಭಾನುವಾರ ಆರಂಭವಾದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 240 ರನ್ ದಾಖಲಿಸುವ ಮೂಲಕ, ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.
ಈ ಪಂದ್ಯ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ಗೆ 100ನೇ ಟೆಸ್ಟ್ ಪಂದ್ಯವಾಗಿರುವುದು ಮತ್ತೊಂದು ವಿಶೇಷ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಮುಗ್ಗರಿಸಿತಾದರೂ, ಅಂತ್ಯದ ವೇಳೆಗೆ ಗೌರವಾನ್ವಿತ ಮೊತ್ತ ದಾಖಲಿಸಿ ಮಂದಹಾಸ ಬೀರಿತು.
ಕೇನ್, ಟಾಮ್ ಆಸರೆ: ಕಿವೀಸ್ ತಂಡದ ಪರ ಟಾಮ್ ಲ್ಯಾತಮ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿದ ಪೀಟರ್ ಫುಲ್ಟಾನ್, ಕೇವಲ 1 ರನ್ ದಾಖಲಿಸಿ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ಆರಂಭಿಕ ಆಘಾತ ನೀಡಿತು.
ಎರಡನೇ ವಿಕೆಟ್ಗೆ ಲ್ಯಾತಮ್ ಜತೆಗೂಡಿದ ಕೇನ್ ವಿಲಿಯಮ್ಸನ್ 166 ರನ್ಗಳ ಅತ್ಯಮೂಲ್ಯ ಶತಕದ ಜತೆಯಾಟ ನೀಡಿ ತಂಡಕ್ಕೆ ಆಸರೆಯಾಗಿ ನಿಂತರು. ಈ ವೇಳೆ 83 ರನ್ ದಾಖಲಿಸಿದ್ದ ಲ್ಯಾತಮ್, ಶಿಲ್ಲಿಂಗ್ಫೋರ್ಡ್ಗೆ ವಿಕೆಟ್ ಒಪ್ಪಿಸಿದರು.
ನಂತರ ತನ್ನ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದ ಕೇನ್ ವಿಲಿಯಮ್ಸನ್ 5ನೇ ಶತಕ ದಾಖಲಿಸಿದರು. ಅಲ್ಲದೆ ದಿನದಾಟದ ಅಂತ್ಯಕ್ಕೆ 105 ರನ್ಗಳಿಸಿ ಅಜೇಯರಾಗುಳಿದರು. ಇನ್ನು ಕೇನ್ ಜತೆಗೆ ಮತ್ತೊಂದು ಅಮೂಲ್ಯ ಜತೆಯಾಟ ಕಟ್ಟುತ್ತಿರುವ ರಾಸ್ ಟೇಲರ್ 34 ರನ್ ದಾಖಲಿಸಿ ಅಜೇಯರಾಗುಳಿದಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ಪರ ಶಿಲ್ಲಿಂಗ್ಫೋರ್ಡ್ ಹಾಗೂ ಜೆರೋಮ್ ಟೇಲರ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 92 ಓವರ್ಗಳಲ್ಲಿ 2 ವಿಕೆಟ್ಗೆ 240
ಕೇನ್ ವಿಲಿಯಮ್ಸನ್ ಅಜೇಯ 105, ಟಾಮ್ ಲ್ಯಾತಮ್ 83, ಜೆರೋಮ್ ಟೇಲರ್ 22ಕ್ಕೆ1, ಶಿಲ್ಲಿಂಗ್ಫೋರ್ಡ್ 62ಕ್ಕೆ1