ಸಿಂಧು, ಶ್ರೀಕಾಂತ್ಗೆ ಸಾರಥ್ಯ
ಟೋಕಿಯೊ: ಉಬರ್ ಕಪ್ ನಂತರ ವಿಶ್ರಾಂತಿ ತೆಗೆದುಕೊಂಡಿರುವ ತವರಿನ ಶೆಟಲ್ ಕ್ವೀನ್ ಸೈನಾ ನೆಹ್ವಾಲ್, ಮಂಗಳವಾರದಿಂದ ಆರಂಭವಾಗಲಿರುವ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಿಂದಲೂ ಹೊರಗುಳಿದಿದ್ದಾರೆ.
ಸೈನಾ ಅನುಪಸ್ಥಿತಿಯಲ್ಲಿ ಉದಯೋನ್ಮುಖ ಪ್ರತಿಭೆಗಳಾದ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಅವರು ಒಟ್ಟು 2,50,000 ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ನವದೆಹಲಿಯಲ್ಲಿ ಕಳೆದ ತಿಂಗಳು ನಡೆದ ಉಬರ್ ಕಪ್ ಪಂದ್ಯಾವಳಿಯಲ್ಲಿ ಸೈನಾ ನೇತೃತ್ವದಲ್ಲಿ ಭಾರತ ತಂಡ ಚೊಚ್ಚಲ ಕಂಚಿನ ಪದಕ ಗೆದ್ದುಕೊಂಡಿತ್ತು.
ಬಿಡುವಿಲ್ಲದ ವೇಳಾಪಟ್ಟಿಯಿಂದ ಬಳಲಿರುವ ಸೈನಾ, ಇದೇ ತಿಂಗಳು ನಡೆಯಲಿರುವ ಇಂಡೋನೇಷಿಯಾ ಮತ್ತು ಆಸ್ಟ್ರೇಲಿಯಾ ಓಪನ್ ಟೂರ್ನಿಗಳಿಗೆ ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳುವ ಉದ್ದೇಶದಿಂದ ಜಪಾನ್ ಓಪನ್ ಪಂದ್ಯಾವಳಿಗೆ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಮತ್ತು ಯುವ ಆಟಗಾರ್ತಿ ತಾನ್ವಿ ಲಾಡ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಕೆ. ಶ್ರೀಕಾಂತ್ ನೇತೃತ್ವ ವಹಿಸಲಿದ್ದಾರೆ.
ಮಂಗಳವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಬುಧವಾರ ನಡೆಯಲಿರುವ ಪ್ರಧಾನಘಟ್ಟದ ತಮ್ಮ ಮೊದಲ ಪಂದ್ಯದಲ್ಲಿ ವಿಶ್ವದ 10ನೇ ಶ್ರೇಯಾಂಕಿತೆ ಸಿಂಧು, ಚೀನಾದ ಜುಯಿ ಯಾವೊ ಅವರ ಸವಾಲು ಎದುರಿಸಲಿದ್ದಾರೆ. ಕಳೆದ ಏಪ್ರಿಲ್ನಲ್ಲಿ ನವದೆಹಲಿಯಲ್ಲಿ ನಡೆದ ಇಂಡಿಯನ್ ಓಪನ್ ಸೂಪರ್ ಸಿರೀಸ್ ಟೂರ್ನಿಯಲ್ಲಿ ಜುಯಿ ಯಾವೊ ಅವರನ್ನು ಸೋಲಿಸಿದ್ದ ಭಾರತೀಯ ಆಟಗಾರ್ತಿ, ಇಲ್ಲಿಯೂ ಕೂಡ ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ.
ಭಾರತದ ಅಗ್ರಕ್ರಮಾಂಕದ ಆಟಗಾರ ಶ್ರೀಕಾಂತ್, ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಜ್ವಿಬ್ಲೆರ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಉಳಿದಂತೆ, ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಪರುಪಳ್ಳಿ ಕಶ್ಯಪ್, ವಿಶ್ವದ 36ನೇ ಕ್ರಮಾಂಕದ ಆಟಗಾರ ಸೌರಭ್ ವರ್ಮಾ, ಆರ್.ಎಂ.ವಿ. ಗುರುಸಾಯಿದತ್ ಕೂಡ ಭಾರತದ ಪಾಲಿನ ಭರವಸೆಯ ಆಟಗಾರರಾಗಿದ್ದಾರೆ.
ಇನ್ನು ಮಹಿಳೆಯರ ಡಬಲ್ಸ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕೇಂದ್ರಬಿಂದುವಾಗಿದ್ದಾರೆ.