ಆಲ್ರೌಂಡರ್ ಗಿಲ್ಮೋರ್ ವಿಧಿವಶ
ಸಿಡ್ನಿ: ಆಸ್ಟ್ರೇಲಿಯಾದ ಪರ 15 ಟೆಸ್ಟ್ ಪಂದ್ಯಗಳನ್ನಾಡಿದ ಮಾಜಿ ಸ್ವಿಂಗ್ ಬೌಲರ್ ಗ್ಯಾರಿ ಗಿಲ್ಮೋರ್ ವಿಧಿವಶರಾಗಿದ್ದಾರೆ.
62 ವರ್ಷದ ಗಿಲ್ಮೋರ್ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಇವರು ತಮ್ಮ ಪತ್ನಿ ಹೆಲೆನ್, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.
1973ರಿಂದ 1977ರವರೆಗೆ ಆಸ್ಟ್ರೇಲಿಯಾ ತಂಡದ ಪ್ರಮುಖ ಅಸ್ತ್ರವಾಗಿದ್ದ ಗ್ಯಾರಿ, 1975ರಲ್ಲಿ ನಡೆದ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಿಂಚಿದ್ದರು.
ಎಡಗೈ ಬೌಲರ್ ಆಗಿದ್ದ ಗಿಲ್ಮೋರ್ 1975ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 14 ರನ್ಗಳಿಗೆ 6 ವಿಕೆಟ್ ಪಡೆಯುವ ಮೂಲಕ ತಂಡ ಫೈನಲ್ಗೆ ಪ್ರವೇಶಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ನಂತರ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 48 ರನ್ಗಳಿಗೆ 5 ವಿಕೆಟ್ ಪಡೆದು ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆದರೆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಗಿಲ್ಮೋರ್ ಅವರಿಗೆ 2005ರಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಈ ವೇಳೆ ಶಸ್ತ್ರ ಚಿಕಿತ್ಸೆಗಾಗಿ ಮಾಜಿ ನಾಯಕ ಇಯಾನ್ ಚಾಪೆಲ್ ಹಣ ಸಂಗ್ರಹಿಸಲು ಮುಂದಾಗಿದ್ದರು. ಗ್ಯಾರಿ ನಿಧನದಿಂದ ಆಸ್ಟ್ರೇಲಿಯಾ ಕ್ರಿಕೆಟ್ಗೆ ಬೇಸರ ತಂದಿದ್ದು, ಮಾಜಿ ಹಾಗೂ ಪ್ರಸಕ್ತ ಆಟಗಾರರು ವಿಷಾದ ವ್ಯಕ್ತಪಡಿಸಿದ್ದಾರೆ.