ಇತಿಹಾಸ ಬರೆದ ಅರ್ಜೆಂಟೀನಾ
ದಿ ಹೇಗ್ (ಹಾಲೆಂಡ್): ಕೆಚ್ಚೆದೆಯ ಹೋರಾಟ ನಡೆಸಿದ ಅರ್ಜೆಂಟೀನಾ ತಂಡ ಹಾಲೆಂಡ್‌ನಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ. ಮಂಗಳವಾರ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-1 ಗೋಲುಗಳ ಅಂತರದಿಂದ ಜಯ ಸಾಧಿಸಿದ ಅರ್ಜೆಂಟೀನಾ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತು.
ಲೀಗ್ ಹಂತದಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ ಅರ್ಜೆಂಟೀನಾ ತಂಡ, ಒಟ್ಟು 12 ಅಂಕ ಗಳಿಸಿಕೊಂಡಿದೆ. ಹೀಗಾಗಿ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ ಸೆಮಿಫೈನಲ್ ಪ್ರವೇಶಿಸುವುದರಿಂದ ವಂಚಿತವಾಗಿದೆ.ಜರ್ಮನಿ ತಂಡ ಪಂದ್ಯಾವಳಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಿಂದ ಕೇವಲ ಆರು ಅಂಕಗಳನ್ನು ಗಳಿಸಿಕೊಂಡಿದೆ. ಎರಡು ಪಂದ್ಯಗಳಲ್ಲಿ ಅರ್ಜೆಂಟೀನಾ ಮತ್ತು ಆತಿಥೇಯ ಹಾಲೆಂಡ್ ವಿರುದ್ಧ ಸೋಲನುಭವಿಸಿದ್ದು ಜರ್ಮನಿಯ ಸೆಮೀಸ್ ಹಾದಿಯನ್ನು ದುರ್ಗಮವಾಗಿಸಿದೆ.ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಹಾಲೆಂಡ್, ಸತತ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ 'ಬಿ' ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರೊಂದಿಗೆ ಜರ್ಮನಿ ತಂಡ ವಿಶ್ವಕಪ್ ಇತಿಹಾಸದಲ್ಲಿ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸುವುದರಿಂದ ವಂಚಿತವಾಗಿದೆ.