ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಗಾನ್ ಟೆನಿಸ್ ಚಾಂಪಿಯನ್‌ಶಿಪ್: ಮತ್ತೆ ಮೊದಲ ಸುತ್ತಿನಲ್ಲೇ ಬಿದ್ದ ಸೋಮ್

Rashmi Kasaragodu
Updated On : 11 Jun 2014, 1:13 am

ಲಂಡನ್: ಅಂತಾರಾಷ್ಟ್ರೀಯ ಟೆನಿಸ್ ಅಖಾಡದಲ್ಲಿ  ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮ್‌ದೇವ್ ದೇವವರ್ಮನ್ ಅವರ ವೈಫಲ್ಯ ಮುಂದುವರಿದಿದೆ.      ಲಂಡನ್‌ನಲ್ಲಿ ನಡೆಯುತ್ತಿರುವ ಎಟಿಪಿ ಏಗಾನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿಯೇ ಭಾರತೀಯ ಆಟಗಾರನಿಗೆ ಸೋಲು ಎದುರಾಗಿದೆ. ಇತ್ತೀಚಿನ ನಿರಂತರ ಕಳಪೆ ಪ್ರದರ್ಶನದಿಂದಾಗಿ ಜಾಗತಿಕ ರ್ಯಾಂಕಿಂಗ್‌ನಲ್ಲಿ ಕೂಡ ಅಗ್ರ 100ರೊಳಗಿನ ಪಟ್ಟಿಯಿಂದ ಹೊರಬಿದ್ದಿರುವ ಸೋಮ್‌ದೇವ್, ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಕೆನ್ನಿ ಡಿ ಶೆಪ್ಪರ್ ಎದುರು 4-6, 5-7 ನೇರ ಸೆಟ್‌ಗಳಿಂದ ಸೋಲನುಭವಿಸಿದರು.
ಎರಡೂ ಸೆಟ್‌ಗಳಲ್ಲಿ ಭಾರತೀಯ ಆಟಗಾರ ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೂ ಸಹ ಪಂದ್ಯದಲ್ಲಿ ಒಂದೇ ಒಂದು ಬ್ರೇಕ್ ಪಾಯಿಂಟ್ ಕೂಡ ಪಡೆಯಲಾಗದೆ ಮತ್ತು ಎರಡು ಬಾರಿ ತಮ್ಮ ಸರ್ವ್‌ಗಳನ್ನು ಕಳೆದುಕೊಳ್ಳುವುದರೊಂದಿಗೆ ಅಂತಿಮವಾಗಿ ಸೋಲಿನ ಕಹಿ ಉಣ್ಣಬೇಕಾಯಿತು.
ಒಂದು ಗಂಟೆ 15 ನಿಮಿಷಗಳವರೆಗೆ ನಡೆದ ಪೈಪೋಟಿಯಲ್ಲಿ ಫ್ರಾನ್ಸ್ ಆಟಗಾರ ಅತ್ಯಂತ ಶಿಸ್ತಿನ ಆಟ ಪ್ರದರ್ಶಿಸುವ ಮೂಲಕ ನಿರೀಕ್ಷಿತ ಗೆಲವು ತಮ್ಮದಾಗಿಸಿಕೊಂಡು ಎರಡನೇ ಸುತ್ತಿಗೆ ಹೆಜ್ಜೆ ಹಾಕಿದರು.
ಎಟಿಪಿ ಸರ್ಕೀಟ್ಸ್‌ಗಳಲ್ಲಿ ಕಳೆದ 10 ಟೂರ್ನಿಗಳಲ್ಲಿ ಸೋಮ್‌ದೇವ್ ದೇವವರ್ಮನ್ ಕೇವಲ ಎರಡು ಪಂದ್ಯಗಳನ್ನಷ್ಟೇ ಗೆದ್ದುಕೊಂಡಿರುವುದು ಅವರ ದಯನೀಯ ವೈಫಲ್ಯಕ್ಕೆ ನಿದರ್ಶನವಾಗಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಓಪನ್ ಪ್ರಶಸ್ತಿ ಗೆದ್ದ ನಂತರ ಭಾರತೀಯ ಆಟಗಾರನ ವೈಫಲ್ಯ ನಿರಂತರವಾಗಿ ಮುಂದುವರಿದಿದ್ದು, ವಿಶ್ವ ರ್ಯಾಕಿಂಗ್‌ನಲ್ಲಿ ಭಾರಿ ಕುಸಿತ ಕಾಣುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement