ಜಾನ್ ಅಬ್ರಾಹಂ ಪಡೆಗೆ ಎನ್‌ಇಯು ಹೆಸರು
ಗುವಾಹಟಿ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಾಲಿವುಡ್ ನಟ ಜಾನ್ ಅಬ್ರಾಹಂ ಮಾಲೀಕತ್ವದ ಗುವಾಹಟಿ ಮೂಲದ ತಂಡಕ್ಕೆ ನಾಮಕರಣ ಮಾಡಲಾಗಿದ್ದು, ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ (ಎನ್‌ಇಯು) ಎಂದು ಹೆಸರಿಡಲಾಗಿದೆ.
ವಿದೇಶದ ನಾಲ್ಕು ಕ್ಲಬ್‌ಗಳ ಜತೆ ತಾಂತ್ರಿಕ ಸಹಭಾಗಿತ್ವ ಹೊಂದಿದ್ದು, ಇವುಗಳ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಂಗಳವಾರ ಈ ಹೆಸರನ್ನು ಪ್ರಕಟಿಸಲಾಗಿದೆ.
ಐಎಸ್‌ಎಲ್ ಪ್ರಕ್ರಿಯೆ ಆರಂಭವಾದಾಗಿನಿಂದಲೂ ನನಗೆ ಈಶಾನ್ಯ ಭಾಗ ಹಾಗೂ ಅಲ್ಲಿನ ಫುಟ್ಬಾಲ್ ಮೇಲೆ ಹೆಚ್ಚಿನ ಒಲವಿತ್ತು. ಹಾಗಾಗಿ ಗುವಾಹಟಿ ಮೂಲಕ ತಂಡವನ್ನು ಹೊಂದಲು ನಿರ್ಧರಿಸಿದೆವು. ಈ ತಂಡ ಸಿಗದಿದ್ದರೆ, ಪಂದ್ಯಾವಳಿಯಿಂದ ದೂರ ಉಳಿಯಲು ನಿರ್ಧರಿಸಿದ್ದೆ. ಈ ಹೆಸರಿಡುವ ಮೂಲಕ ಈ ಭಾಗದ 8 ರಾಜ್ಯಗಳನ್ನು ಭಾರತೀಯ ಫುಟ್ಬಾಲ್‌ನಲ್ಲಿ ಪ್ರತಿನಿಧಿಸಲು ಇಚ್ಛಿಸುತ್ತೇನೆ ಎಂದು ಜಾನ್ ಅಬ್ರಾಹಂ ತಿಳಿಸಿದ್ದಾರೆ.
ಇನ್ನು ವಿದೇಶಿ ಕ್ಲಬ್‌ಗಳ ಸಹಯೋಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾನ್, ಈ ತಂಡದಲ್ಲಿ ಪಾಲುದಾರರಾಗಲು ಸಾಕಷ್ಟು ವಿದೇಶಿ ಕ್ಲಬ್‌ಗಳು ಉತ್ಸಾಹ ತೋರಿದ್ದವು. ಆದರೆ ನಾವು ಅವರಲ್ಲಿ ಕೆಲವರೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆವು ಎಂದು ತಿಳಿಸಿದರು.
ಐಎಸ್‌ಎಲ್‌ನಿಂದ ವಿವಾದವನ್ನು ದೂರವಿಡಲು ಪ್ರಮುಖವಾಗಿ ಬೆಟ್ಟಿಂಗ್ ಅನ್ನು ದೂರವಿಡಲು ನಾವು ಬೆಂಬಲಿಸುತ್ತೇವೆ. ಈ ಕುರಿತು ನಾವು ಆಟಗಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಫುಟ್ಬಾಲ್ ಅನ್ನು ಸ್ವಚ್ಛವಾಗಿಡುವ ವಿಶ್ವಾಸವಿದೆ ಎಂದರು.