ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನಿಶಾಮ್ ಶತಕ, ಸುಸ್ಥಿತಿಯಲ್ಲಿ ಕಿವೀಸ್

Rashmi Kasaragodu
Updated On : 11 Jun 2014, 1:11 am

ಕಿಂಗ್‌ಸ್ಟನ್: ಆರಂಭಿಕ ಕೇನ್ ವಿಲಿಯಮ್ಸನ್ ಹಾಕಿಕೊಟ್ಟ ಭದ್ರ ಬುನಾದಿಯ ನಂತರ ಮಧ್ಯಮ ಕ್ರಮಾಂಕದಲ್ಲಿ ಜಿಮ್ಮಿ ನಿಶಾಮ್ ಅವರ ಅಮೋಘ ಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಪಂದ್ಯದ ಎರಡನೇ ದಿನವಾದ ಸೋಮವಾರ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲೆಂಡ್ ತಂಡ, 174.3 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 508 ರನ್ ದಾಖಲಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ದಿನದಾಟ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 19 ರನ್ ದಾಖಲಿಸಿದೆ.
ಮೊದಲ ದಿನದಾಟದಲ್ಲಿ 2 ವಿಕೆಟ್‌ಗೆ 240 ರನ್‌ಗಳಿಸಿದ್ದ ಕಿವೀಸ್ ಪಡೆ, ಎರಡನೇ ದಿನವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿತು. ಶತಕ ದಾಖಲಿಸಿ ಅಜೇಯರಾಗುಳಿದಿದ ಕೇನ್ ವಿಲಿಯಮ್ಸನ್, ದಿನದಾಟದಲ್ಲಿ ತಮ್ಮ ಖಾತೆಗೆ ಕೇವಲ 8 ರನ್ ಸೇರಿಸಿಕೊಂಡು ಬೆನ್ ಎಸೆತದಲ್ಲಿ ಬೌಲ್ಡ್ ಆದರು. ಇನ್ನು ಟೇಲರ್ (55) ಅರ್ಧಶತಕ ದಾಖಲಿಸಿದ ನಂತರ ಪೆವಿಲಿಯನ್ ಸೇರಿಕೊಂಡರು. ನಾಯಕ ಮೆಕಲಂ ಸಹ 7 ರನ್‌ಗೆ ತಮ್ಮ ಇನಿಂಗ್ಸ್‌ಗೆ ಅಂತ್ಯ ಹಾಡಿದರು.
ಈ ವೇಳೆ ಜತೆಗೂಡಿದ ಜಿಮ್ಮಿ ನಿಶಾಮ್ ಹಾಗೂ ಜಾನ್ ವಾಟ್ಲಿಂಗ್ ತಂಡಕ್ಕೆ ಮತ್ತೊಂದು ಅತ್ಯಮೂಲ್ಯ 201 ರನ್‌ಗಳ ದ್ವಿಶತಕದ ಜತೆಯಾಟ ನೀಡುವ ಮೂಲಕ ತಂಡ 500ರ ಗಡಿಯತ್ತ ಹೆಜ್ಜೆ ಹಾಕಲು ನೆರವಾದರು. ನಿಶಾಮ್ 11 ಬೌಂಡರಿ 2 ಸಿಕ್ಸರ್ ಸೇರಿದಂತೆ 107 ರನ್ ದಾಖಲಿಸಿದರು. ಇನ್ನು ವಾಟ್ಲಿಂಗ್ 7 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸುವ ಮೂಲಕ 89 ರನ್ ದಾಖಲಿಸಿದರು.
ವೆಸ್ಟ್ ಇಂಡೀಸ್ ಪರ ಸುಲೆಮನ್ ಬೆನ್ ಹಾಗೂ ಶೇನ್ ಶಿಲ್ಲಿಂಗ್‌ಫೊರ್ಡ್ ತಲಾ 3 ವಿಕೆಟ್ ಪಡೆದರು.
ಬೃಹತ್ ಮೊತ್ತವನ್ನು ಮುಂದಿಟ್ಟುಕೊಂಡು ತಮ್ಮ ಇನಿಂಗ್ಸ್ ಆರಂಭಿಸಿರುವ ಆತಿಥೇಯ ವೆಸ್ಟ್ ಇಂಡೀಸ್ ತಂಡ, ವಿಕೆಟ್ ನಷ್ಟವಿಲ್ಲದೇ 19 ರನ್ ದಾಖಲಿಸಿದೆ. ವಿಂಡೀಸ್ ಪರ ಆರಂಭಿಕರಾದ ಕ್ರಿಸ್ ಗೇಯ್ಲ್ (8) ಹಾಗೂ ಕೀರನ್ ಪೊವೆಲ್ (11) ಅಜೇಯರಾಗುಳಿದಿದ್ದಾರೆ. ಈ ಪಂದ್ಯ ಕ್ರಿಸ್ ಗೇಯ್ಲ್ ಪಾಲಿಗೆ 100ನೇ ಟೆಸ್ಟ್ ಪಂದ್ಯವಾಗಿರುವುದರಿಂದ ಇವರ ಬ್ಯಾಟಿಂಗ್ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿವೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 508ಕ್ಕೆ7 ಡಿಕ್ಲೇರ್
ಕೇನ್ ವಿಲಿಯಮ್ಸನ್ 113, ಜಿಮ್ಮಿ ನಿಶಾಮ್ 107, ವಾಟ್ಲಿಂಗ್ 89, ಬೆನ್ 142ಕ್ಕೆ3, ಶಿಲ್ಲಿಂಗ್‌ಫೊರ್ಡ್ 145ಕ್ಕೆ3
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 19
ಕೀರನ್ ಪೊವೆಲ್ ಅಜೇಯ 11, ಕ್ರಿಸ್ ಗೇಯ್ಲ್ ಅಜೇಯ 8, ಸೌಥಿ 8ಕ್ಕೆ0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement