ಭಾರತಕ್ಕೆ ಕೊರಿಯಾ ಸವಾಲು
ದಿ ಹೇಗ್ (ಹಾಲೆಂಡ್): ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿರುವ ಭಾರತ ತಂಡ, ಹಾಲೆಂಡ್ನಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ 9ನೇ ಸ್ಥಾನಕ್ಕಾಗಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
ಕಳೆದ ಬಾರಿ 2010ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ 8ನೇ ಸ್ಥಾನ ಪಡೆದಿದ್ದ ಭಾರತ ತಂಡ, ಈ ಪಂದ್ಯಾವಳಿಯಲ್ಲಿ 9ನೇ ಸ್ಥಾನವನ್ನಾದರೂ ಪಡೆಯಲು ಎದುರು ನೋಡುತ್ತಿದೆ.
ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 2012ರ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ ವಿರುದ್ಧ ಸೋಲನುಭವಿಸಿರುವ ದಕ್ಷಿಣ ಕೊರಿಯಾ 'ಬಿ' ಗುಂಪಿನಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿರುವ ಕೊರಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರ ಡ್ರಾ ಸಾಧಿಸುವ ಮೂಲಕ ಕೇವಲ ಒಂದು ಅಂಕ ಗಳಿಸಿಕೊಂಡು, ಗುಂಪಿನಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ.
ಇನ್ನು ಲೀಗ್ ಹಂತದ ತನ್ನ ಮೊದಲೆರಡು ಪಂದ್ಯಗಳ ಅಂತಿಮ ಕ್ಷಣಗಳಲ್ಲಿ ಗೋಲು ಬಿಟ್ಟುಕೊಡುವ ಮೂಲಕ ಭಾರತ ತಂಡ 'ಎ' ಗುಂಪಿನಲ್ಲಿ 5ನೇ ಸ್ಥಾನ ಪಡೆದುಕೊಂಡಿತ್ತು. ಆಡಿದ ಐದು ಪಂದ್ಯಗಳಲ್ಲಿ ಭಾರತ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದರೆ, ಒಂದರಲ್ಲಿ ಡ್ರಾ ಕಂಡಿತ್ತು. ಭಾರತ 69ನೇ ನಿಮಿಷದಲ್ಲಿ ಗೋಲು ಬಿಟ್ಟ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ತಂಡ ಸೋಮವಾರ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 3-2 ಗೋಲುಗಳ ಅಂತರದಿಂದ ಜಯ ಕಾಣುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಕಳೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ ಸೋಲನುಭವಿಸಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.