ಜಪಾನ್ ಓಪನ್: ತಾನ್ವಿ, ಜ್ವಾಲಾ- ಅಶ್ವಿನಿಗೆ ಸೋಲು
ಭಾರತದ ಭರವಸೆಯ ಯುವ ಶಟ್ಲರ್ ತಾನ್ವಿ ಲಾಡ್ ಹಾಗೂ ಹಿರಿಯ ಪ್ರತಿಭೆಗಳಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ...
ಟೋಕಿಯೊ: ಭಾರತದ ಭರವಸೆಯ ಯುವ ಶಟ್ಲರ್ ತಾನ್ವಿ ಲಾಡ್ ಹಾಗೂ ಹಿರಿಯ ಪ್ರತಿಭೆಗಳಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 2,50,000 ಡಾಲರ್ ಬಹುಮಾನ ಮೊತ್ತದ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಿಂದ ಹೊರಬಿದ್ದಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ವಿಶ್ವದ 18ನೇ ಶ್ರೇಯಾಂಕಿತೆ ಸ್ಕಾಟ್ಲೆಂಡ್ನ ಕರ್ಸ್ಟಿ ಗಿಲ್ಮೋರ್ಗೆ ಅಚ್ಚರಿಯ ಶಾಕ್ ನೀಡಿ ಭರ್ಜರಿ ಆರಂಭ ಪಡೆದಿದ್ದ ತಾನ್ವಿ ಲಾಡ್ ಎರಡನೇ ಸುತ್ತಿನಲ್ಲಿ ಮಾತ್ರ ಅದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲರಾದರು.
ಚೀನಾದ ಜಿನ್ ಲಿಯು ಅವರು 18-21, 12-21 ನೇರ ಅಂಕಗಳ ಅಂತರದಲ್ಲಿ ಗೆಲವು ದಾಖಲಿಸುವ ಮೂಲಕ ಭಾರತೀಯ ಆಟಗಾರ್ತಿಗೆ ಹೊರದಾರಿ ತೋರಿಸಿದರು.
ಈ ಮಧ್ಯೆ ಅಪಾರ ನಿರೀಕ್ಷೆ ಇಡಲಾಗಿದ್ದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಸಹ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿನಲ್ಲೇ ಸೋಲಿನ ಕಹಿ ಉಂಡಿದ್ದಾರೆ.
ಜ್ವಾಲಾ ಮತ್ತು ಅಶ್ವಿನಿ 12-21, 23-21, 19-21ರಿಂದ ಆರನೇ ಶ್ರೇಯಾಂಕಿತ ಜೋಡಿ ಕೊರಿಯಾದ ಕಯುಂಗ್ ಯೂನ್ ಜಂಗ್ ಮತ್ತು ಹಾ ನಾ ಕಿಮ್ ವಿರುದ್ಧ ಸೋಲನುಭವಿಸಿದರು.
ಉಳಿದಂತೆ, ಸೌರಭ್ ವರ್ಮಾ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನಿನ ನಾಲ್ಕನೇ ಶ್ರೇಯಾಂಕಿತ ಕೆನಿಚಿ ಟ್ಯಾಗೊ ವಿರುದ್ಧ 9-21, 6-21ರಿಂದ ಸುಲಭವಾಗಿ ಸೋಲನುಭವಿಸಿದರು.
ಮಿಶ್ರಡಬಲ್ಸ್ ವಿಭಾಗದಲ್ಲಿ ತರುಣ್ ಕೋನಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 17-21, 11-21ರಿಂದ ಜಪಾನಿನ ಮಿಸಾಕಿ ಮಾಸುಟೊಮೊ ಮತ್ತು ಕೆನಿಚಿ ಹಯಾಕವ ಎದುರು ತಲೆಬಾಗಿಸಿದರು.