ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ಲೀನ್‌ಸ್ವೀಪ್ ಮೇಲೆ ಭಾರತ ಕಣ್ಣು

ಎರಡನೇ ಏಕದಿನ ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಿಸಿದರೂ ಸಹ ಸ್ಟುವರ್ಟ್...

Mainashree
Updated On : 18 Jun 2014, 9:28 am

ಮೀರ್‌ಪುರ: ಎರಡನೇ ಏಕದಿನ ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಿಸಿದರೂ ಸಹ ಸ್ಟುವರ್ಟ್ ಬಿನ್ನಿಯ ದಾಖಲೆ ಬೌಲಿಂಗ್ ನೆರವಿನಿಂದ ಬಾಂಗ್ಲಾದೇಶವನ್ನು ಬೇಗನೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ಟೀಂ ಇಂಡಿಯಾ ಪಾಲಿಗೆ ಅಂತಿಮ ಕದನ ಕೇವಲ ಔಪಚಾರಿಕ.
ಆದರೂ, ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಸಹ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಭಾರತದ ಆಟಗಾರರಿದ್ದಾರೆ. ಕಳೆದ ಮಂಗಳವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಕೇವಲ 105 ರನ್‌ಗಳಿಗೆ ಆಲೌಟಾಗಿತ್ತು. ಆದರೆ, ಈ ಸಾಧಾರಣ ಗುರಿ ಬೆಂಬತ್ತುವಲ್ಲಿಯೂ ಮುಗ್ಗರಿಸಿದ್ದ ಆತಿಥೇಯ ಬಾಂಗ್ಲಾದೇಶ ಆಟಗಾರರು ಕೇವಲ 58 ರನ್‌ಗಳಿಗೆ ಪತನಗೊಂಡಿದ್ದರು. ಈ ಪಂದ್ಯದಲ್ಲಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಕೇವಲ 4 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಶ್ರೇಷ್ಠ ಬೌಲಿಂಗ್ ಸಾಧನೆಯೊಂದಿಗೆ ತವರಿಗೆ ಅಚ್ಚರಿಯ ಗೆಲವು ತಂದುಕೊಟ್ಟಿದ್ದರು. ಸುರೇಶ್ ರೈನಾ ನಾಯಕತ್ವದಲ್ಲಿ ಬಹುತೇಕ ಎರಡನೇ ದರ್ಜೆಯ ತಂಡವಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಪ್ರಮುಖವಾಗಿ ಸಾಂಘಿಕ ಶಕ್ತಿ ಪ್ರದರ್ಶಿಸುತ್ತಿರುವ ರೈನಾ ಪಡೆ ಬಾಂಗ್ಲಾದೇಶದ ಹೆಡೆಮುರಿ ಕಟ್ಟಿಹಾಕುವಲ್ಲಿ ಭಾರಿ ಯಶಸ್ಸು ಕಂಡಿದ್ದಾರೆ.
ತಂಡದ ಆಟಗಾರರ ಪ್ರದರ್ಶನದ ಕುರಿತು ರೈನಾ ಸಂತುಷ್ಟಗೊಂಡಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು ಮತ್ತು ಚೇತೇಶ್ವರ ಪೂಜಾರ ಅವರ ಪ್ರದರ್ಶನ ಕೊಂಚಮಟ್ಟಿಗೆ ಚಿಂತೆಯಾಗಿದೆ.
ಈಗಾಗಲೇ ಸರಣಿ ಗರಿ ಭಾರತಕ್ಕೆ ದಕ್ಕಿರುವುದರಿಂದ ತಂಡದ ಕೋಚ್ ಡಂಕನ್ ಫ್ಲೆಚರ್ ಅವರು ಅಂತಿಮ ಪಂದ್ಯದಲ್ಲಿ ಕೆಲ ಪ್ರಯೋಗಗಳನ್ನು ಮಾಡುವ ಸಾಧ್ಯತೆಯಿದೆ.
ಮತ್ತೊಂದೆಡೆ ತವರು ನೆಲದಲ್ಲಿ ಈಗಾಗಲೇ ಸರಣಿ ಕೈಚೆಲ್ಲಿರುವ ಬಾಂಗ್ಲಾದೇಶ ಆಟಗಾರರು ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆ ಮೂಲಕ ಕ್ಲೀನ್ ಸ್ವೀಪ್ ಸೋಲಿನ ಮುಖಭಂಗ ಅನುಭವಿಸುವುದರಿಂದ ಪಾರಾಗುವ ಉದ್ದೇಶ ಅವರದ್ದು.
ೆಎರಡನೇ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ್ದ ಮಧ್ಯಮ ವೇಗಿ ತಸ್ಕಿನ್ ಅಹ್ಮದ್ ಚೊಚ್ಚಲ ಪಂದ್ಯದಲ್ಲೇ ಅದ್ಭುತ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. ಅವರು 5 ವಿಕೆಟ್ ಪಡೆಯುವ ಮೂಲಕ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಇಷ್ಟು ವಿಕೆಟ್ ಕಬಳಿಸಿದ ಬಾಂಗ್ಲಾದೇಶದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಾಯಕ ಮುಷ್ಫೀಕರ್ ರಹೀಂ ಅಂತಿಮ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಭಾರತಕ್ಕೆ ಗೆಲವು ಬಿಟ್ಟುಕೊಡದಿರಲು ನಿರ್ಧರಿಸಿದ್ದು, ತಮ್ಮ ಆಟಗಾರರಲ್ಲಿ ಹೊಸ ಸ್ಫೂರ್ತಿ ತುಂಬುವ ಮೂಲಕ ಉತ್ತಮ ರಣತಂತ್ರ ರೂಪಿಸಿಕೊಂಡು ರೈನಾ ಪಡೆಯನ್ನು ಸೆರೆ ಹಿಡಿಯಲು ಸಿದ್ಧರಾಗಿದ್ದಾರೆ.
ತಂಡಗಳು
ಭಾರತ: ಸುರೇಶ್ ರೈನಾ (ನಾಯಕ), ರಾಬಿನ್ ಉತ್ತಪ್ಪ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ವೃದ್ಧಿಮಾನ್ ಸಹಾ, ಅಕ್ಷರ್ ಪಟೇಲ್, ಪರ್ವೇಜ್ ರಸೂಲ್, ಮೋಹಿತ್ ಶರ್ಮಾ, ಉಮೇಶ್ ಯಾದವ್, ಅಮಿತ್ ಮಿಶ್ರಾ, ಆರ್. ವಿನಯ್‌ಕುಮಾರ್, ಕೇದಾರ್ ಜಾಧವ್, ಮನೋಜ್ ತಿವಾರಿ
ಬಾಂಗ್ಲಾದೇಶ: ಮುಷ್ಫೀಕರ್ ರಹೀಂ (ನಾಯಕ), ತಮೀಮ್ ಇಕ್ಬಾಲ್, ಅನಾಮುಲ್ ಹಕ್, ಮಿಥುನ್ ಅಲಿ, ಶಕೀಬ್ ಅಲ್ ಹಸನ್, ಮಹಮುದುಲ್ಲಾ, ರಿಯಾಧ್, ಜಿಯಾ-ಉರ್ ರೆಹಮಾನ್, ನಾಸಿರ್ ಹುಸೇನ್, ತಸ್ಕಿನ್ ಅಹ್ಮದ್, ಅಲ್-ಅಮಿನ್ ಹುಸೇನ್, ಮಶ್ರಫೆ ಮೊರ್ತಜಾ, ಸೋಹಾಗ್ ಗಾಜಿ, ಮೊಮಿನುಲ್ ಹಸನ್, ಅಬ್ದುರ್ ರಜಾಕ್, ಶಮ್ಶೂರ್ ರೆಹಮಾನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement