ಸೈನಾ ನೆಹ್ವಾಲ್ ಶುಭಾರಂಭ
ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಇಂಡೋನೇಶಿಯಾ ಓಪನ್ ...
ಜಕಾರ್ತ: ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಇಂಡೋನೇಶಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭರ್ಜರಿ ಆರಂಭ ಪಡೆದಿದ್ದಾರೆ.
ಆದರೆ, ಭಾರತದ ಇತರೆ ಪ್ರಮುಖರಾದ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಮತ್ತು ಪರುಪಳ್ಳಿ ಕಶ್ಯಪ್ ಅವರು 7 ಲಕ್ಷದ 50 ಸಾವಿರ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಪ್ರಾರಂಭದಲ್ಲಿಯೇ ಮುಗ್ಗರಿಸಿ ಭಾರಿ ನಿರಾಸೆ ಅನುಭವಿಸಿದ್ದಾರೆ.
ಹೈದರಾಬಾದ್ನ ಹುಡುಗಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪೋರ್ನ್ಟಿಪ್ ಬುರಾನಾಪ್ರಸೆರ್ಸುಕ್ ಅವರನ್ನು 21-15, 21-10 ನೇರ ಅಂಕಗಳಿಂದ ಪರಾಭವಗೊಳಿಸಿದರು. ಈ ಮುನ್ನ 2009, 2010 ಮತ್ತು 2012ರಲ್ಲಿ ಈ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತೀಯ ಆಟಗಾರ್ತಿ ಇದೀಗ ನಾಲ್ಕನೇ ಬಾರಿಗೆ ಚಾಂಪಿಯನ್ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮುಂದಿನ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ನ ಕರ್ಸ್ಟಿ ಗಿಲ್ಮೋರ್ ಅವರನ್ನು ಎದುರಿಸಲಿದ್ದಾರೆ. ಕರ್ಸ್ಟಿ ಅವರು ತಮ್ಮ ಪಂದ್ಯದಲ್ಲಿ ಜಪಾನಿನ ಸಯಾಕಾ ಟಕಾಹಶಿ ಅವರನ್ನು 21-19, 19-21, 22-20 ಅಂಕಗಳಿಂದ ಪರಾಭವಗೊಳಿಸಿದರು.
ಆದರೆ ನಿರಾಶಾದಾಯಕ ಫಲಿತಾಂಶವೆಂದರೆ ವಿಶ್ವದ 10ನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಆರಂಭದಲ್ಲೇ ಸೋಲಿನ ಕಹಿ ಉಂಡಿದ್ದು. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಹಾಗೂ ಮೂರನೇ ಶ್ರೇಯಾಂಕಿತೆ ಚೀನಾದ ಯಿಹಾನ್ ವಾಂಗ್ ಅವರು 26-24, 21-17ರಿಂದ ಜಯಗಳಿಸಿ ಸಿಂಧುಗೆ ಹೊರದಾರಿ ತೋರಿಸಿದರು. ಇನ್ನು ಪುರುಷರ ಸಿಂಗಲ್ಸ್ನಲ್ಲಿ ಪಿ.ಕಶ್ಯಪ್ ಮತ್ತು ಕೆ. ಶ್ರೀಕಾಂತ್ ಕೂಡ ಬೇಗನೆ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. ಕಶ್ಯಪ್ ಅವರು 21-19, 8-21, 22-24ರಿಂದ ವಿಶ್ವದ ನಾಲ್ಕನೇ ಶ್ರೇಯಾಂಕಿತ ಕೆನಿಚಿ ಟ್ಯಾಗೊ ಎದುರು ತಲೆಬಾಗಿಸಿದರು.
ಮತ್ತೊಂದು ಪಂದ್ಯದಲ್ಲಿ ವಿಶ್ವದ 23ನೇ ಶ್ರೇಯಾಂಕಿತ ಶ್ರೀಕಾಂತ್ 12-21, 21-17, 16-21ರಿಂದ ಚೀನಾದ ಚೆನ್ ಯೂಕುನ್ ವಿರುದ್ಧ ಆಘಾತ ಅನುಭವಿಸಿದರು. ಕಶ್ಯಪ್ ಮತ್ತು ಶ್ರೀಕಾಂತ್ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದಂತಾಗಿದೆ. ಕಳೆದ ವಾರ ನಡೆದ ಜಪಾನ್ ಓಪನ್ ಟೂರ್ನಿಯಲ್ಲಿ ಸಹ ಭಾರತದ ಈ ಆಟಗಾರರು ಆರಂಭದಲ್ಲೇ ನಿರ್ಗಮಿಸಿದ್ದರು.
ಉಳಿದಂತೆ, ಸೌರಭ್ ವರ್ಮಾ 13-21, 21-19, 16-21ರಿಂದ ಇಂಡೋನೇಶಿಯಾದ ವಿಸ್ನು ಯೂಲಿ ಪ್ರಸೆಯೊ ಎದುರು ಮತ್ತು ಪ್ರಣಯ್ 20-22, 20-22ರಿಂದ ಇಂಡೋನೇಶಿಯಾದ ಅಲಮ್ಸಿಯಾ ಯೂನಸ್ ವಿರುದ್ಧ ಸೋಲನುಭವಿಸಿದರು.