ಸವಾಲುಗಳ ಅರಿವಿದೆ: ಧೋನಿ
ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಭಾರತ ತಂಡ ಪ್ರಯಾಣ ಬೆಳೆಸಿದ್ದು...
ನವದೆಹಲಿ: ಐದು ಟೆಸ್ಟ್ ಪಂದ್ಯಗಳ ಸರಣಿಗಾಗಿ ಭಾರತ ತಂಡ ಪ್ರಯಾಣ ಬೆಳೆಸಿದ್ದು, ಪ್ರವಾಸದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ.
ಭಾನುವಾರ ಇಂಗ್ಲೆಂಡ್ಗೆ ತೆರಳುವ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ ಹಾಗೂ ತಂಡದ ಮುಖ್ಯ ಕೋಚ್ ಡಂಕನ್ ಫ್ಲೆಚರ್, ತಂಡದ ಬಲ ಹಾಗೂ ಮುಂಬರುವ ಸವಾಲುಗಳ ಮಾಹಿತಿ ನೀಡಿದರು.
ಇಂಗ್ಲೆಂಡ್ ತಂಡದಲ್ಲಿ ಕೆವಿನ್ ಪೀಟರ್ಸನ್ ಅಲಭ್ಯತೆ ಭಾರತಕ್ಕೆ ನೆರವಾಗಲಿದೆ. ಅಲ್ಲದೆ ಇಂಗ್ಲೆಂಡ್ ತಂಡ ಹೊಸ ಆಟಗಾರರಿಂದ ಕೂಡಿದ್ದು, ಇನ್ನಷ್ಟೇ ಹೊಸ ರೂಪ ಪಡೆಯುತ್ತಿದೆ. ಹಾಗಾಗಿ ಸರಣಿ ಹೆಚ್ಚು ಕುತೂಹಲಕಾರಿಯಾಗಲಿದೆ ಎಂದು ಫ್ಲೆಚರ್ ಅಭಿಪ್ರಾಯಪಟ್ಟರು. ಇನ್ನು ಭಾರತ ತಂಡದ ಬಗ್ಗೆ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನಮ್ಮ ತಂಡದಲ್ಲಿ ಕೆಲವು ಆಟಗಾರರು ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಆದರೆ ಬಹುತೇಕ ಆಟಗಾರರು, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ಸ್ವಲ್ಪ ಅನುಭವ ಪಡೆದಿದ್ದಾರೆ. ನಾವು ಸ್ವಲ್ಪ ಮುಂಚಿತವಾಗಿ ಇಂಗ್ಲೆಂಡ್ಗೆ ತೆರಳುತ್ತಿದ್ದು, ಅಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನಾಡುವ ಮೂಲಕ ಪರಿಸ್ಥಿತಿಗೆ ಹೊಂದಿಕೊಳ್ಳಬಹುದು. ನಮ್ಮ ಸವಾಲುಗಳ ಬಗ್ಗೆ ಅರಿವಿದ್ದು, ಹೆಚ್ಚಿನ ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಮಾಜಿ ಆಟಗಾರರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ಆರಂಭಿಕರಾಗಿ ವೀರೇಂದ್ರ ಸೆಹ್ವಾಗ್, ಹಾಗೂ ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್, ನಂತರ ಸಚಿನ್, ಲಕ್ಷ್ಮಣ್ ಹಾಗೂ ಗಂಗೂಲಿ ಅವರ ಸ್ಥಾನವನ್ನು ತುಂಬಲು ಕಷ್ಟವಾಗುತ್ತದೆ. ಆದರೆ ನಾವು ಆಟಗಾರರ ನಡುವೆ ಹೋಲಿಕೆ ಮಾಡುವ ಬದಲು, ಪ್ರಸಕ್ತ ತಂಡದ ಬಗ್ಗೆ ಯೋಚಿಸಬೇಕು ಎಂದರು.
ಭಾರತ ತಂಡ ಜೂ.26ರಿಂದ ಜೂ.28 ಹಾಗೂ ಜು.1ರಿಂದ ಜು.3ರವರೆಗೆ ಕ್ರಮವಾಗಿ ಲೆಸಿಸ್ಟರ್ಶೈರ್ ಹಾಗೂಡರ್ಬಿಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ನಂತರ ಜು.9ರಿಂದ ನಾಟಿಂಗ್ಹ್ಯಾಮ್ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.