ಫೆಡರರ್ ಶುಭಾರಂಭ, ಸೋಮ್ಗೆ ಸೋಲು
ಸ್ವಿಜರ್ಲೆಂಡ್ನ ರೋಜರ್ ಫೆಡರರ್ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ...
ಲಂಡನ್: ಸ್ವಿಜರ್ಲೆಂಡ್ನ ರೋಜರ್ ಫೆಡರರ್ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ನಾಲ್ಕನೇ ಶ್ರೇಯಾಂಕಿತ ಫೆಡರರ್ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ
ಇಟಲಿಯ ಪೌಲೊ ಲೊರೆಂಜಿ ವಿರುದ್ಧ 6-1, 6-1, 6-3 ನೇರ ಸೆಟ್ಗಳಿಂದ ಜಯಗಳಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಆದರೆ, ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸೋಮ್ದೇವ್ ದೇವ್ವರ್ಮನ್ ಮಾತ್ರ ಮೊದಲ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸಿ ಹೊರನಡೆದಿದ್ದಾರೆ.
ಇಂದೇ ನಡೆದ ಪುರುಷರ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್ದೇವ್ 6-4, 3-6, 3-6, 6-3, 3-6 ಸೆಟ್ಗಳಿಂದ ಪೋಲೆಂಡ್ನ 15ನೇ ಶ್ರೇಯಾಂಕಿತ ಜೆರ್ಜಿ ಜಾನೊವಿಚ್ ಎದುರು ಸೋಲನುಭವಿಸಿದರು.
ಉಳಿದಂತೆ, ಸ್ವಿಜರ್ಲೆಂಡ್ನ 5ನೇ ಶ್ರೇಯಾಂಕಿತ ಆಟಗಾರ ಸ್ಟಾನಿಸ್ಲಾಸ್ ವಾರ್ವಿಂಕ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಪೋರ್ಚುಗಲ್ನ ಜೊವೊ ಸೌಸಾ ವಿರುದ್ಧ 6-3, 6-4, 6-3 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಫ್ರಾನ್ಸ್ನ 14ನೇ ಶ್ರೇಯಾಂಕಿತ ಜೋ ವಿಲ್ಫ್ರೆಡ್ ಸೋಂಗಾ ಐದು ಸೆಟ್ಗಳ ಸುದೀರ್ಘ ಹೋರಾಟದಲ್ಲಿ ಆಸ್ಟ್ರಿಯಾದ ಜರ್ಗೆನ್ ಮೆಲ್ಜರ್ ಅವರ ವಿರುದ್ಧ 6-1, 3-6, 3-6, 6-2, 6-4ರಿಂದ ಪ್ರಯಾಸದ ಗೆಲವು ದಾಖಲಿಸಿ ಎರಡನೇ ಸುತ್ತು ತಲುಪಿದರು.
ಆಸ್ಟ್ರೇಲಿಯಾದ ಲಿಟನ್ ಹೇವಿಟ್ 6-2, 6-7 (14-16), 6-1, 6-4ರಿಂದ ಪೋಲೆಂಡ್ನ ಮೈಕಲ್ ಪ್ರಜೇಸಿಂಜಿ ವಿರುದ್ಧ ಎರಡನೇ ಸುತ್ತಿನಲ್ಲಿ ಜಯಗಳಿಸಿದರು.
ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಸಬಿನೆ ಲಿಸಿಕಿ ಅವರು ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲ್ನ ಜೂಲಿಯಾ ಗ್ಲುಶ್ಕೋ ಅವರನ್ನು 6-2, 6-1 ನೇರ ಸೆಟ್ಗಳಿಂದ ಮಣಿಸಿ ಮುನ್ನಡೆದರು.
ಪೋಲೆಂಡ್ನ ನಾಲ್ಕನೇ ಶ್ರೇಯಾಂಕಿತೆ ಆಗ್ನೆಸ್ಕಾ ರಾಡ್ವಾಂಸ್ಕಾ 6-2, 6-1 ಸೆಟ್ಗಳಿಂದ ರೊಮೇನಿಯಾದ ಆ್ಯಂಡ್ರಿ ಮಿಟು ಅವರನ್ನು ಸೋಲಿಸಿದರು.