ಸೈನಾ- ತುಳಸಿ ಮುಖಾಮುಖಿ
ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧು ಅವರು...
ಸಿಡ್ನಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧು ಅವರು, ಆಸ್ಟ್ರೇಲಿಯಾ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಗಮನ ಸೆಳೆಯುವ ವಿಷಯವೆಂದರೆ, ದ್ವಿತೀಯ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಆಟಗಾರ್ತಿ ಪಿ. ಸಿ ತುಳಸಿ ಮತ್ತು ಸೈನಾ ಮುಖಾಮುಖಿಯಾಗುತ್ತಿದ್ದಾರೆ. ತುಳಸಿ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಜಾಮೀ ಸುಬಾಂಧಿ ಅವರನ್ನು 21-16, 21-18 ನೇರ ಗೇಮ್ಗಳಿಂದ ಸೋಲಿಸಿದ್ದಾರೆ. ಪಂದ್ಯಾವಳಿಯಲ್ಲಿ 6ನೇ ಶ್ರೇಯಾಂಕ ಪಡೆದಿರುವ ಸೈನಾ, ಚೀನಾದ ಸುನ್ ಯೂ ವಿರುದ್ಧ 22-24, 21-17, 21-10 ಗೇಮ್ಗಳಿಂದ ಪ್ರಯಾಸದ ಜಯ ಕಂಡುಕೊಂಡರು. ಇನ್ನು 8ನೇ ಶ್ರೇಯಾಂಕ ಪಡೆದಿರುವ ಸಿಂಧು ಅವರು, ಜಪಾನ್ನ ಆಯಾ ಒಹೋರಿ ಅವರನ್ನು 21-16, 21-14 ಗೇಮ್ಗಳಿಂದ ಪರಾಭವಗೊಳಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯ್ ಪ್ರಣೀತ್ ಅವರು ಸ್ಥಳೀಯ ಆಟಗಾರ ಹೋಯ್ ಕೀಟ್ ವಿರುದ್ಧ 21-7, 21-11 ಗೇಮ್ಗಳಿಂದ ಜಯ ಕಂಡುಕೊಂಡಿದ್ದಾರೆ.