ಐದು ಟೆಸ್ಟ್‌ಗಳ ಸರಣಿ ಆಡುವುದು ಹೊಸ ಸವಾಲು: ಧೋನಿ
ಲಿಸೆಸ್ಟರ್‌ಶೈರ್: ಆತಿಥೇಯ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದಯನೀಯ ಸೋಲುಂಡು ಆತ್ಮವಿಶ್ವಾಸದಿಂದ ಕುಗ್ಗಿ ಹೋಗಿದ್ದರೂ ಸಹ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಆಂಗ್ಲರ ಬಗ್ಗೆ ತೀರ ಎಚ್ಚರದಿಂದಿದ್ದಾರೆ.
ಆತಿಥೇಯ ಇಂಗ್ಲೆಂಡ್ ವಿರುದ್ಧ ಆಡಲಾಗುವ ಐದು ಟೆಸ್ಟ್‌ಗಳ ಸರಣಿ ಟೀಂ ಇಂಡಿಯಾ ಪಾಲಿಗೆ ಹೊಸ ಸವಾಲಾಗಿದೆ. ಅನನುಭವಿಗಳಿಂದ ಕೂಡಿರುವ ನಮ್ಮ ತಂಡಕ್ಕೆ ಇಂಗ್ಲೆಂಡ್ ಕಠಿಣ ಸವಾಲು ಒಡ್ಡುವುದರಲ್ಲಿ ಅನುಮಾನವಿಲ್ಲ ಎಂದು ಧೋನಿ ಪ್ರತಿಕ್ರಿಯಿಸಿದ್ದಾರೆ.
ತವರು ನೆಲದ ಲಾಭ ಹೊಂದಿರುವ ಇಂಗ್ಲೆಂಡ್‌ಗೆ ವಾತಾವರಣದ ಬಗ್ಗೆ ಚೆನ್ನಾಗಿ ಪರಿಚಿತವಿದೆ. ಮೇಲಾಗಿ ಉತ್ತಮ ತಂಡವೂ ಅದಾಗಿದ್ದು, ನಮಗಿಂತಲೂ ಹೆಚ್ಚು ಸಮರ್ಥವಾಗಿದೆ ಎಂದಿರುವ ಧೋನಿ, ಐದು ಟೆಸ್ಟ್, ಐದು ಏಕದಿನ ಹಾಗೂ ಒಂದು ಟಿ-20 ಪಂದ್ಯಗಳಿಂದ ಕೂಡಿರುವ ಈ ಸರಣಿ ಸುದೀರ್ಘವಾಗಿದ್ದು, ನಮ್ಮ ಪಾಲಿಗೆ ಇದು ವಿಶೇಷವಾಗಿದೆ ಎಂದಿದ್ದಾರೆ.
ತವರಿನಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 0-1ರಿಂದ, ಏಕದಿನ ಸರಣಿಯಲ್ಲಿ 2-3ರಿಂದ ಹಾಗೂ ಏಕೈಕ ಟಿ-20 ಪಂದ್ಯದಲ್ಲೂ ದಯನೀಯ ಸೋಲುಂಡಿದ್ದು, ತೀರ ಒತ್ತಡದಲ್ಲಿದೆ.
ಆದರೆ, ಹಿಂದಿನ ಫಲಿತಾಂಶದ ಮೇಲೆ ಒಂದು ತಂಡವನ್ನು ಅಳೆಯುವುದು ಸಾಧ್ಯವಿಲ್ಲ. ಬದಲಾಗಿ ಆ ತಂಡದಲ್ಲಿನ ಹೊಂದಾಣಿಕೆ ಮೇಲೆ ಅದರ ಸಾಮರ್ಥ್ಯ ತೂಗಿ ನೋಡಬೇಕಿದ್ದು, ಈ ನಿಟ್ಟಿನಲ್ಲಿ ಇಂಗ್ಲೆಂಡ್ ಹೆಚ್ಚು ಸಮತೋಲನದಿಂದ ಕೂಡಿದ ತಂಡವಾಗಿದೆ ಎಂದು ಟೀಂ ಇಂಡಿಯಾ ನಾಯಕ ಅಭಿಪ್ರಾಯಪಟ್ಟರು.