ಐಸಿಸಿ ಗದ್ದುಗೆ ಏರಿದ ಶ್ರೀನಿ
ಮೆಲ್ಬರ್ನ್: ಬಿಸಿಸಿಐನಿಂದ ಹೊರ ಹಾಕಲ್ಪಟ್ಟಿರುವ ಎನ್. ಶ್ರೀನಿವಾಸನ್ ಅವರು ಗುರುವಾರ ಐಸಿಸಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪರಿಷ್ಕರಣೆ ಮಾಡಲಾದ ಐಸಿಸಿಯ 52 ಮಂಡಳಿಯ ಸದಸ್ಯರು ಭಾಗವಹಿಸಿದ್ದ ಮೆಲ್ಬರ್ನ್ನಲ್ಲಿ ನಡೆದ ಸಭೆಯಲ್ಲಿ ಶ್ರೀನಿ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಗಿದೆ.
ಇಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಐಸಿಸಿಯ ನಿಯಮಾವಳಿಗೆ ಮಾಡಲಾದ ತಿದ್ದುಪಡಿಗೆ ನೂತನ ಮಂಡಳಿ ಅನುಮೋದನೆ ನೀಡಿತು. 2013ರ ಐಪಿಎಲ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾಗಿರುವ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಸಿಸಿಐ ಅಧ್ಯಕ್ಷ ಗಾದೆಯಿಂದ ದೂರ ಸರಿಯಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಶ್ರೀನಿವಾಸನ್ ಅವರನ್ನು ಐಸಿಸಿ ಮುಖ್ಯಸ್ಥರ ಹುದ್ದೆಗೆ ನೇಮಕ ಮಾಡಿರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಸುಪ್ರೀಂ ನಿರಾಕರಿಸಿದರೂ ನೇಮಕ: ಐಸಿಸಿ ಮುಖ್ಯಸ್ಥರ ಹುದ್ದೆಗೆ ಶ್ರೀನಿವಾಸನ್ ಅವರನ್ನು ನೇಮಕ ಮಾಡುವುದನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಹೊಸದಾಗಿ ರಚನೆ ಮಾಡಲಾಗಿರುವ ಹುದ್ದೆಗೆ ಸಂಸ್ಥೆಯ ಸದಸ್ಯರು ಶ್ರೀನಿವಾಸನ್ ಅವರನ್ನು ಅವಿರೋಧವಾಗಿ ನೇಮಕ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ಸಂಸ್ಥೆಯಲ್ಲಿ ಈಗ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಪ್ರಮುಖ ನಿರ್ಧಾರಗಳನ್ನು ಈ ಮೂರು ರಾಷ್ಟ್ರಗಳು ತಗೆದುಕೊಳ್ಳಲಿವೆ. 'ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯಸ್ಥನಾಗಿರುವುದು ಗೌರವದ ವಿಷಯ ಎನಿಸುತ್ತದೆ. ಐಸಿಸಿ ಕ್ರಿಕೆಟ್ನ ಅಂಗಣದ ಒಳಗೆ ಮತ್ತು ಹೊರಗೆ ಮೂಲ ಆಧಾರ ಸ್ತಂಭವಾಗಿದೆ' ಎಂದು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಶ್ರೀನಿವಾಸನ್ ತಿಳಿಸಿದ್ದಾರೆ.
ಫೆಬ್ರವರಿ 8ರಂದು ಸಿಂಗಾಪುರದಲ್ಲಿ ನಡೆದ ಸಭೆಯಲ್ಲಿ ಐಸಿಸಿ ಮಂಡಳಿ ಹೊಸ ನಿಲವಳಿಯನ್ನು ತೆಗೆದುಕೊಂಡಿತ್ತು. ಏಪ್ರಿಲ್ 10ರಂದು ಅದನ್ನು ಅಂತಿಮಗೊಳಿಸಲಾಗಿತ್ತು. ಆ ಸಮಯದಲ್ಲಿ ಮಾಡಲಾದ ಸಂಸ್ಥೆಯ ಬದಲಾವಣೆಗಳಿಗೆ ಗುರುವಾರ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. 2016ರಿಂದ ಐಸಿಸಿ ಎರಡು ವರ್ಷಗಳ ಅವಧಿಗೆ ತನ್ನ ಮುಖ್ಯಸ್ಥರನ್ನು ಆಯ್ಕೆ ಮಾಡಿಕೊಳ್ಳಲಿದೆ.
ಅಮೆರಿಕ ಕ್ರಿಕೆಟ್ ಸಂಸ್ಥೆ ಮಾನ್ಯತೆ ನೀಡಿದ ಸಂಸ್ಥೆಯಾಗಿದೆ ಎಂದು ಐಸಿಸಿ ಖಚಿತಪಡಿಸಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಆಡಳಿತ ಮಂಡಳಿ ಅಮೆರಿಕ ಹಾಗೂ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿರುವ ಸಂಸ್ಥೆಗಳೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸಲಿವೆ ಎಂದು ಐಸಿಸಿ ತಿಳಿಸಿದೆ.
ನಾನು ಕಳಂಕಿತನಲ್ಲ: ಶ್ರೀನಿವಾಸನ್: 'ನನ್ನ ಮೇಲೆ ಯಾವುದೇ ರೀತಿಯ ಕಳಂಕವಿಲ್ಲ. ಅಲ್ಲದೇ, ನಾನು ಈ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ರೀತಿಯ ತನಿಖೆ ನಡೆದರೂ ನಾನು, ಆರೋಪಗಳಿಂದ ಮುಕ್ತವಾಗಲಿದ್ದೇನೆ' ಎಂದು ಐಸಿಸಿ ಮುಖ್ಯಸ್ಥ ಸ್ಥಾನ ಅಲಂಕರಿಸಿದ ನಂತರ ಶ್ರೀನಿವಾಸನ್ ಹೇಳಿದ್ದಾರೆ.
ಬಿಸಿಸಿಐ ಅಭಿನಂದನೆ: ಐಸಿಸಿ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಶ್ರೀನಿವಾಸನ್ ಅವರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ. ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಶ್ರೀನಿವಾಸನ್ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಶ್ಲ್ಯಾಘನೆ ಮಾಡಿದೆ.