ಜರ್ಮನಿ ವಿಜಯೋತ್ಸವ; ಸೋತರೂ ಅಮೆರಿಕ ಪ್ರಿಕ್ವಾರ್ಟರ್‌ಫೈನಲ್‌ಗೆ
ಪ್ರಮುಖ ಆಟಗಾರ ಥಾಮಸ್ ಮುಲ್ಲರ್ ಗಳಿಸಿದ ಮತ್ತೊಂದು ಆಕರ್ಷಕ ಗೋಲಿನ ನೆರವಿನಿಂದ ಪ್ರಬಲ...
ರೇಸಿಫ್: ಪ್ರಮುಖ ಆಟಗಾರ ಥಾಮಸ್ ಮುಲ್ಲರ್ ಗಳಿಸಿದ ಮತ್ತೊಂದು ಆಕರ್ಷಕ ಗೋಲಿನ ನೆರವಿನಿಂದ ಪ್ರಬಲ ಜರ್ಮನಿ ತಂಡ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅಮೆರಿಕ ತಂಡದ ವಿರುದ್ಧ 1-0 ಗೋಲಿನಿಂದ ಜಯಭೇರಿ ಬಾರಿಸಿದೆ.
ಎರೆನಾ ಪೆರ್ನಾಂಬುಕೊ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಜಿ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜರ್ಮನಿ ತಂಡ ಎದುರಾಳಿ ಅಮೆರಿಕ ವಿರುದ್ಧ ಪೂರ್ಣ ತನ್ನ ಪ್ರಾಬಲ್ಯ ಮೆರೆಯಿತು. ಈ ಗೆಲವಿನೊಂದಿಗೆ ಜರ್ಮನಿ ತಂಡ ಅಂಕ ಸಂಪಾದನೆಯನ್ನು 7ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
ವಿಜೇತ ಜರ್ಮನಿ ತಂಡದ ಪರ ಪಂದ್ಯದ 55ನೇ ನಿಮಿಷದಲ್ಲಿ ಥಾಮಸ್ ಮುಲ್ಲರ್ ಗೋಲು ಗಳಿಸಿದರು.
ಪಂದ್ಯದ ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ಸಮಬಲ ಹೋರಾಟ ನಡೆಸಿದ್ದರಿಂದ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಆದರೆ, ಎರಡನೇ ಅವಧಿಯ ಆಟ ಆರಂಭವಾಗಿ ಕೇವಲ 10 ನಿಮಿಷ ಕಳೆಯುವಷ್ಟರಲ್ಲಿ ಜರ್ಮನಿ ಗೋಲಿನ ಸಂಭ್ರಮ ಆಚರಿಸಿತು. ನಂತರದಲ್ಲಿ ಅಮೆರಿಕ ತಂಡ ಎದುರಾಳಿ ಜೊತೆ ಸಮಗೌರವ ಸಾಧಿಸಲು ಪ್ರಯತ್ನಿಸಿದರೂ ಫಲ ಕಾಣಲಿಲ್ಲ. ಈ ಸೋಲಿನಿಂದಾಗಿ ಅಮೆರಿಕ ತಂಡ ಅಂಕಪಟ್ಟಿಯಲ್ಲಿ ಪೋರ್ಚುಗಲ್ ಜೊತೆ ಜಂಟಿ ಎರಡನೇ ಸ್ಥಾನ ಪಡೆಯಿತು. ಆದರೆ, ಉತ್ತಮ ಗೋಲು ಸರಾಸರಿ ಆಧಾರದ ಮೇಲೆ ಪೋರ್ಚುಗಲ್ ಪಡೆಯನ್ನು ಹೊರಗಟ್ಟಿದ ಅಮೆರಿಕನ್ನರು ನಾಕೌಟ್ ಸುತ್ತು ತಲುಪಿದರು.