ಜೋಕೊವಿಚ್ ಜಯದ ಕೇಕೆ
ಲಂಡನ್: ಅಗ್ರ ಶ್ರೇಯಾಂಕಿತ ಸರ್ಬಿಯಾದ ಆಟಗಾರ ನೊವಾಕ್ ಜೋಕೊವಿಚ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲವು ದಾಖಲಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೋಕೊವಿಚ್ 6-4, 6-2, 6-4 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಜೊ ವಿಲ್‌ಫ್ರೆಡ್ ಸೊಂಗಾ 6-2, 6-2, 7-5ರಿಂದ ಚೈನೀಸ್ ತೈಪೇನ ಜಿಮ್ಮಿ ವಾಂಗ್ ವಿರುದ್ಧ ಜಯಗಳಿಸಿ ನಾಲ್ಕನೇ ಸುತ್ತು ತಲುಪಿದರು.
ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್ ತಮ್ಮ ಎದುರಾಳಿ ಆ್ಯಂಟೆ ಪ್ಯಾವಿಕ್ ವಿರುದ್ಧ 6-4, 7-6(7-4), 7-5 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ರೊಮೇನಿಯಾದ ಸಿಮೊನಾ ಹಾಲೆಪ್ 6-3, 4-6, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಆದರೆ ಮೂರನೇ ಶ್ರೇಯಾಂಕಿತೆ ಚೀನಾದ ನಾ ಲೀ ಮೂರನ್ ಸುತ್ತಿನ ಪಂದ್ಯದಲ್ಲಿ ಜೆಕ್‌ನ ಜಾಲಾವೊವಾ ಸ್ಟ್ರೈಕೋವಾ ಎದುರು 6-7 (5-7), 6-7 (5-7) ರಿಂದ ಆಘಾತ ಅನುಭವಿಸಿದರು.
ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್ನಿಯಾಕಿ ತಮ್ಮ ಎದುರಾಳಿ ಕ್ರೊವೇಷಿಯಾದ ಅನಾ ಕೊಂಜು ವಿರುದ್ಧ 6-3, 6-0 ನೇರ ಸೆಟ್‌ಗಳ ಸುಲಭ ಗೆಲವು ದಾಖಲಿಸಿದರು.
ಗುರುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ರಾಫೆಲ್ ನಡಾಲ್ 4-6, 7-6 (7-4), 6-4, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರೆ, ರೋಜರ್ ಫೆಡರರ್ 6-3, 7-5, 6-3 ಸೆಟ್‌ಗಳ ಅಂತರದಲ್ಲಿ ಗಿಲ್ಸ್ ಮುಲ್ಲರ್ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ರಷ್ಯಾದ ಮಾರಿಯಾ ಶರಪೋವಾ 6-2, 6-1 ನೇರ ಸೆಟ್‌ಗಳಿಂದ ಟಿಮಿಯಾ ಬ್ಯಾಸಿನ್‌ಸ್ಕಿ ವಿರುದ್ಧ ಗೆಲವು ದಾಖಲಿಸಿದರು.
ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೋಡಿ 6-2, 7-6 (7-4), 3-6, 6-4 ಸೆಟ್‌ಗಳ ಅಂತರದಲ್ಲಿ ಎದುರಾಳಿ ಜೋಡಿ ರಾಜೀವ್ ರಾಮ್ ಹಾಗೂ ಮಾರಿಯಜ್ ಫ್ರಿಸ್ಟೆನ್‌ಬರ್ಗ್ ಜೋಡಿ ವಿರುದ್ಧ ಜಯಿಸಿತು.