ಸೆಮೀಸ್‌ಗೆ ಸೈನಾ, ಮುಗ್ಗರಿಸಿದ ಸಿಂಧು
ಸಿಡ್ನಿ: ಭಾರತೀಯ ಶಟಲ್ ಕ್ವೀನ್ ಸೈನಾ ನೆಹ್ವಾಲ್ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಆದರೆ, ತವರಿನ ಮತ್ತೊಬ್ಬ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು ಮಾತ್ರ ಕ್ವಾರ್ಟರ್‌ಫೈನಲ್‌ನಲ್ಲಿಯೇ ಸೋಲನುಭವಿಸಿ ಚಾಂಪಿಯನ್‌ಪಟ್ಟದ ಆಸೆ ಕೈಬಿಟ್ಟಿದ್ದಾರೆ.
ಆರನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನಿನ ಎರಿಕೊ ಹೀರೋಸ್ ಅವರನ್ನು 21-18, 21-19 ನೇರ ಅಂಕಗಳ ಅಂತರದಲ್ಲಿ ಪರಾಭವಗೊಳಿಸಿದರು.
ಹೈದರಾಬಾದ್ ಆಟಗಾರ್ತಿ ಸೈನಾ, ಎರಡೂ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೇವಲ 47 ನಿಮಿಷಗಳ ಆಟದಲ್ಲಿಯೇ ಅಂತಿಮ ಗೆಲವು ದಾಖಲಿಸಿ ಮುನ್ನಡೆದರು.
ಭಾರತೀಯ ಆಟಗಾರ್ತಿ ನಾಲ್ಕನೇ ಸುತ್ತಿನ ಮುಖಾಬಲದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತೆ ಚೀನಾದ ಶಿಕ್ಸಿಯಾನ್ ವಾಂಗ್ ಅವರ ಕಠಿಣ ಸವಾಲು ಎದುರಿಸಬೇಕಾಗಿದೆ.
ಎರಡು ಬಾರಿಯ ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ವಾಂಗ್ ವಿರುದ್ಧ ವಿಶ್ವದ ಎಂಟನೇ ಶ್ರೇಯಾಂಕಿತೆ ಸೈನಾ 4-3 ಅಂತರದ ಗೆಲವಿನ ದಾಖಲೆ ಹೊಂದಿದ್ದಾರೆ. ಇದು ಸೈನಾಗೆ ಪ್ಲಸ್ ಪಾಯಿಂಟ್. ಆದರೂ, ಸಹ ಕಳೆದ ಎರಡೂ ಮುಖಾಮುಖಿಗಳಲ್ಲಿ ವಾಂಗ್ ವಿರುದ್ಧ ಭಾರತೀಯ ಆಟಗಾರ್ತಿ ಸೋಲನುಭವಿಸಿದ್ದು ಸೈನಾಗೆ ಎಚ್ಚರಿಕೆ ಗಂಟೆಯಾಗಿದೆ. ಹಾಗಾಗಿ, ಸೆಮಿಫೈನಲ್ ಹಾದಿ ದಾಟುವುದು ಸೈನಾಗೆ ಸುಲಭವಾಗಿಲ್ಲ. ಮೇಲಾಗಿ ವಾಂಗ್ ಉತ್ತಮ ಲಯದಲ್ಲಿರುವುದರಿಂದ ಗೆಲವಿಗಾಗಿ ಬೆವರು ಸುರಿಸಬೇಕಾಗುತ್ತದೆ.
ಈ ಮಧ್ಯೆ ಎಂಟನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಎಂಟರಘಟ್ಟದಲ್ಲೇ ಸೋಲನುಭವಿಸಿ ಭಾರಿ ನಿರಾಸೆ ಅನುಭವಿಸಿದ್ದಾರೆ. ಹೈದರಾಬಾದ್‌ನವರೇ ಆದ ಸಿಂಧು 17-21, 17-21 ನೇರ ಅಂಕಗಳ ಅಂತರದಲ್ಲಿ ಸ್ಪೇನಿನ ಕರೊಲಿನಾ ಮಾರಿನ್ ಎದುರು ತಲೆಬಾಗಿಸಿದರು.
ವಿಶ್ವದ 10ನೇ ಶ್ರೇಯಾಂಕಿತೆ ಸಿಂಧು ಎರಡೂ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಹ 11ನೇ ಕ್ರಮಾಂಕದ ಸ್ಪೇನ್ ಆಟಗಾರ್ತಿಯ ಎದುರು ಅಂತಿಮವಾಗಿ 47 ನಿಮಿಷಗಳ ಪೈಪೋಟಿ ನಂತರ ಸೋಲಿನ ಕಹಿ ಅನುಭವಿಸಿದರು.