ಉದ್ಯಾನ ನಗರಿಯಲ್ಲಿ ಸಾಂಬಾ ಸಂಭ್ರಮ
ಬೆಂಗಳೂರು: ಸಾಂಬಾ ನಾಡು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಜ್ವರ, ಉದ್ಯಾನ ನಗರ ಬೆಂಗಳೂರಿಗೂ ಆವರಿಸಿದೆ. ಬ್ರೆಜಿಲ್‌ಗೆ ಹೋಗಿ ಬಂದ ಪುಟ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಒರಾಯನ್ ಮಾಲ್ ಮಾಡಿದೆ.
ಮಾಲ್‌ಗೆ ಪ್ರವೇಶಿಸುತ್ತಿದ್ದಂತೆ ಫುಟ್ಬಾಲ್ ವಿಶ್ವಕಪ್‌ನ ದೊಡ್ಡ ಕಟೌಟ್ ಫುಟ್ಬಾಲ್ ಅಭಿಮಾನಿಗಳನ್ನು ಸ್ವಾಗತಿಸುತ್ತದೆ. ಒಳಗೆ ಪ್ರವೇಶಿಸಿದ ನಂತರ ನೀವು ವಿಶ್ವಕಪ್‌ನಲ್ಲಿ ಭಾಗವಹಿಸಿರುವ 32 ತಂಡಗಳ ಬಾವುಟಗಳೊಂದಿಗೆ ಹಲವಾರು ವಿಶೇಷಗಳನ್ನು ನೋಡಬಹುದು.
ಕೇಜ್ ಫುಟ್ಬಾಲ್: ನೀವು ಮೂರು ಜನರು ಸೇರಿ ಹೋದರೆ, ಮೂರು ಜನರಿರುವ ಎದುರಾಳಿ ತಂಡದೊಂದಿಗೆ ಅಲ್ಲಿ ಒಂದು ಫುಟ್ಬಾಲ್ ಪಂದ್ಯವನ್ನು ಆಡಬಹುದು. ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಚೆಂಡು ಆಚೆ ಹೋಗದಂತೆ ನೆಟ್ ಕಟ್ಟಿ ಈ ಅಂಗಣವನ್ನು ಸಿದ್ಧಪಡಿಸಲಾಗಿದೆ. ವಾರಾಂತ್ಯದಲ್ಲಿ ಇಲ್ಲಿ ಕಾರ್ಪೊರೇಟ್ ತಂಡಗಳು ಬಂದು ಸ್ಪರ್ಧೆಗಳನ್ನು ನಡೆಸುತ್ತವೆ.
ಫ್ರೀಸ್ಟೈಲ್ ಫುಟ್ಬಾಲ್: ವ್ಯಕ್ತಿಯೊಬ್ಬ ಚೆಂಡಿನೊಂದಿಗೆ ಸರಸವಾಡುವುದೇ ಫ್ರೀಸ್ಟೈಲ್ ಫುಟ್ಬಾಲ್. ಚೆಂಡು ನೆಲಕ್ಕೆ ಬೀಳದಂತೆ ಅದನ್ನು ತನ್ನ ಕೈ, ಕಾಲು, ತಲೆ ಹಾಗೂ ಪಾದದವರೆಗೂ ಸಾಗಿಸಿಕೊಂಡು ಹೋಗುತ್ತಾನೆ ಆತ. ಇಲ್ಲಿ ಆಸಕ್ತರಿಗೆ ಅದನ್ನು ಉಚಿತವಾಗಿ ಹೇಳಿಕೊಡಲಾಗುತ್ತದೆ. ಆದರೆ, ಇದು ವಾರಾಂತ್ಯದಲ್ಲಿ ಮಾತ್ರ.
ಗೋಲ್‌ಪೋಸ್ಟ್: ಒಂದು ಕಟೌಟ್‌ನಲ್ಲಿ ಮೂರು ಗೋಲ್‌ಪೋಸ್ಟ್‌ಗಳನ್ನು ಮಾಡಿ, ಅದರ ಎದುರಿಗೆ ಸಿಂಥೆಟಿಕ್ ಹಾಸ್ ಮೇಲೆ ಚೆಂಡನ್ನು ಇರಿಸಲಾಗಿದೆ. ಮೂರು ಅವಕಾಶಗಳಲ್ಲಿ ಚೆಂಡನ್ನು ಗೋಲ್‌ಪೋಸ್ಟ್‌ನೊಳಗೆ ನೂಕಿದರೆ, ಲಕ್ಕಿ ಡ್ರಾ ಅಭಿಮಾನಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾವಣೆಯಾಗುತ್ತದೆ.
ಭವಿಷ್ಯ ನುಡಿದು ಬಹುಮಾನ ಗೆಲ್ಲಿ: ಪ್ರತಿ ದಿನ ವಿಶ್ವಕಪ್‌ನಲ್ಲಿ ನಡೆಯುವ ಪಂದ್ಯದ ಭವಿಷ್ಯ ನಡಿಯಲು ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಕೆಲ ಬಾಟಲ್‌ಗಳನ್ನು ಈಡಲಾಗಿದೆ. ಅವುಗಳಿಗೆ ಕೋಲಿನ ತುದಿಗೆ ಕಟ್ಟಿರುವ ಹುಕ್‌ಗಳನ್ನು ಹಾಕಬೇಕು. ಅಲ್ಲಿ ನೀವು ಯಶಸ್ವಿಯಾದರೆ, ನೀವು ಭವಿಷ್ಯ ನುಡಿದ ತಂಡ ಗೆದ್ದರೆ, ನಿಮಗೆ ಲಕ್ಕಿ ಡ್ರಾ ಬಹುಮಾನ ನೀಡುವ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರುತ್ತದೆ.
ಬ್ರೆಜಿಲ್‌ನಲ್ಲಿ ಖ್ಯಾತವಾಗಿರುವ ಮತ್ತು ಫಿಟ್ನೆಸ್‌ಗೆ ಅಗತ್ಯವಾಗಿರುವ ಜುಂಬಾ ಡ್ಯಾನ್ಸ್, ಉಗುರಿನ ಮೇಲೆ ನ್‌ಮ ನೆಚ್ಚಿನ ತಂಡದ ಧ್ವಜದ ಅಚ್ಚು ಸೇರಿದಂತೆ ವಿಶ್ವಕಪ್ ಫುಟ್ಬಾಲ್‌ಗೆ ಸಂಬಂಧಿಸಿದ ಕ್ಯಾಪ್, ಗಾಗಲ್, ಜರ್ಸಿ ಮುಂತಾದವುಗಳನ್ನು ಧರಿಸಿ ಇಲ್ಲಿ ಫೋಟೊ ತಗಿಸಿಕೊಳ್ಳಬಹುದು.
ಟ್ರೋಫಿಯ ಮಾದರಿ
ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ನೀಡುವ ಟ್ರೋಫಿಯ ಬೃಹತ್ ಗಾತ್ರದ ಮಾದರಿಯನ್ನು ಇಲ್ಲಿ ರಚಿಸಲಾಗಿದೆ. ಅಭಿಮಾನಿಗಳು ಬಂದು ಅದರ ಎದುರಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಹೋಗುವುದೇ ಒಂದು ಸೊಗಸು.