ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ರಶಸ್ತಿ ಸುತ್ತಿಗೆ ಸೈನಾ

Vishwanath S
Updated On : 29 Jun 2014, 12:32 pm

ಸಿಡ್ನಿ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್ 750,000 ಡಾಲರ್ ಬಹುಮಾನ ಮೊತ್ತದ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.
ವಿಶ್ವದ ಎಂಟನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್, ಶನಿವಾರ ನಡೆದ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಅಗ್ರಮಾನ್ಯ ಆಟಗಾರ್ತಿ ಶಿಕ್ಸಿಯಾನ್ ವಾಂಗ್ ಅವರನ್ನು 21-19, 16-21, 21-15 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿದರು.
ಒಂದು ಗಂಟೆ 16 ನಿಮಿಷಗಳ ಕಾಲ ಇಲ್ಲಿನ ಸ್ಟೇಟ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಮ್ಯಾರಥಾನ್ ಮುಖಾಮುಖಿಯಲ್ಲಿ ಭಾರತೀಯ ಆಟಗಾರ್ತಿ ಮೂರೂ ಗೇಮ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಈ ಗೆಲವಿನೊಂದಿಗೆ ಹೈದರಾಬಾದ್‌ನ ಸೈನಾ 20 ತಿಂಗಳುಗಳ ನಂತರ ಮೊದಲ ಬಾರಿಗೆ ಸೂಪರ್ ಸಿರೀಸ್ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದರು. ಈ ಮುನ್ನ 2012ರ ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ ಸೂಪರ್ ಸಿರೀಸ್‌ನಲ್ಲಿ ಫೈನಲ್ ತಲುಪಿದ ನಂತರ ಮತ್ತೆ ಸೈನಾಗೆ ಅನೇಕ ಟೂರ್ನಿಗಳಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೀಗ, ವಿಶ್ವದ ಎರಡನೇ ಶ್ರೇಯಾಂಕಿತೆ ವಾಂಗ್ ವಿರುದ್ಧ ಅದ್ಭುತ ಜಯ ದಾಖಲಿಸುವ ಮೂಲಕ ಮತ್ತೊಮ್ಮೆ ಸೂಪರ್ ಸಿರೀಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವನ್ನು ಪಡೆದುಕೊಂಡರು. ಜೊತೆಗೆ ಚೀನಾ ಆಟಗಾರ್ತಿಯ ವಿರುದ್ಧದ ಈವರೆಗೆನ ಕದನದಲ್ಲಿ ಭಾರತೀಯ ಆಟಗಾರ್ತಿ 5-3 ಗೆಲವಿನ ಅಂತರದಲ್ಲಿ ತಮ್ಮ ಪ್ರಭುತ್ವವನ್ನೂ ಮುಂದುವರಿಸಿದರು.
ವಾಂಗ್ ಅವರನ್ನು ಸೋಲಿಸಲು ಮೂರೂ ಗೇಮ್‌ಗಳಲ್ಲಿ ನಡೆಸಿದ ಹೋರಾಟ ಕಠಿಣವಾಗಿತ್ತು. ಅಂತಿಮವಾಗಿ ಚೀನಾದ ಅಗ್ರಮಾನ್ಯ ಆಟಗಾರ್ತಿಯ ವಿರುದ್ಧ ಗೆಲವು ದಾಖಲಿಸಿ ಫೈನಲ್ ತಲುಪಿದ್ದು ಖುಷಿಯಾಗಿದೆ ಎಂದು ಸೈನಾ ಟ್ಟೀಟ್ ಮಾಡಿದ್ದಾರೆ. ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸೈನಾ ನೆಹ್ವಾಲ್‌ಗೆ ಸ್ಪೇನಿನ ಕರೊಲಿಯಾ ಮಾರಿನ್ ಸವಾಲು ಎದುರಾಗಲಿದೆ. ವಿಶ್ವದ 11ನೇ ಶ್ರೇಯಾಂಕಿತ ಆಟಗಾರ್ತಿ ಕರೊಲಿನಾ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಜಪಾನಿನ ಯೂಯಿ ಹಸಿಮೋಟೊ ಅವರನ್ನು 21-17, 21-16 ನೇರ ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ಫೈನಲ್ ತಲುಪಿದ್ದಾರೆ.
ಈ ಮುನ್ನ ಸ್ಪೇನ್ ಆಟಗಾರ್ತಿಯ ವಿರುದ್ಧ ಸೈನಾ ಒಮ್ಮೆ ಮಾತ್ರ ಸೆಣಸಿದ್ದಾರೆ. ಕಳೆದ ವರ್ಷ ಇಂಡೋನೇಶಿಯಾ ಟೂರ್ನಿಯಲ್ಲಿ ಸೆಣಸಿದಾಗ ಭಾರತೀಯ ಆಟಗಾರ್ತಿ ಗೆಲವು ದಾಖಲಿಸಿ ತಮ್ಮ ಪ್ರಭುತ್ವ ಮೆರೆದಿದ್ದರು. ಈ ಫಲಿತಾಂಶ ಸೈನಾಗೆ ಸ್ಫೂರ್ತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement