ಹಾಲೆಂಡ್, ನೇಪಾಳಕ್ಕೆ ಸಿಕ್ಕ ಟಿ20 ಮಾನ್ಯತೆ
ಮೆಲ್ಬರ್ನ್: ಹಾಲೆಂಡ್ ಮತ್ತು ನೇಪಾಳ ತಂಡಗಳಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡುವ ಮಾನ್ಯತೆ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಪ್ಪಿಕೊಂಡಿದೆ.
ಶನಿವಾರ ಇಲ್ಲಿ ಮುಕ್ತಾಯವಾದ ತನ್ನ ಎರಡು ದಿನಗಳ ವಾರ್ಷಿಕ ಸಮ್ಮೇಳನದಲ್ಲಿ ಅದು ಈ ಒಪ್ಪಿಗೆ ನೀಡಿದೆ.ಇದರೊಂದಿಗೆ ಎಂಟು ಐಸಿಸಿ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು ಟಿ20 ಸ್ಥಾನಮಾನ ಪಡೆದುಕೊಂಡಂತಾಗಿದೆ. ಆಫ್ಘಾನಿಸ್ತಾನ, ಹಾಂಕಾಂಗ್, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿ ಹಾಗೂ ಯುನೈಟೆಡ್ ಅರಬ್ ಎರೇಟ್ಸ್ ತಂಡಗಳು ಈಗಾಗಲೇ ಟಿ20 ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ್ದು, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮಾನ್ಯತೆ ಪಡೆಯುವ ಹಂತದಲ್ಲಿವೆ.
ಅಮೆರಿಕ ಕ್ರಿಕೆಟ್ ಸಂಸ್ಥೆ ಐಸಿಸಿ ಮಾನ್ಯತೆ ಪಡೆದ ಸದಸ್ಯ ಸಂಸ್ಥೆ ಎಂದು ಈಗಾಗಲೇ ಮಂಡಳಿ ಖಚಿತಪಡಿಸಿದೆ. ಓಮನ್ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಲು ಐಸಿಸಿಯ ಕ್ರಿಕೆಟ್ ಅಭಿವೃದ್ಧಿ ಸಮಿತಿ ಸಿಫಾರಸ್ಸು ಮಾಡಿದೆ. ಇದು ಮಾನ್ಯತೆ ಪಡೆದರೆ 38ನೇ ಅಸೋಸಿಯೇಟ್ ಸದಸ್ಯ ಸಂಸ್ಥೆಯಾಗಲಿದೆ.
ಅಲ್ಲದೆ, ತನ್ನ ಸದಸ್ಯ ಸಂಸ್ಥೆಗಳಲ್ಲಿ ಬ್ರೂನೀ ಮೇಲೆ ನಿಷೇಧ ಹೇರುವ ಮತ್ತು ಟೊಂಗಾ ಸಂಸ್ಥೆಯನ್ನು ತೆಗೆದು ಹಾಕಿರುವುದನ್ನು ಅದು ಖಚಿತಪಡಿಸಿದೆ.ಅಲ್ಲದೆ, ಸಿಂಗಾಪುರದ ಇಮ್ರಾನ್ ಖವಾಜಾ ಮತ್ತು ಬರ್ಮುಡಾದ ನೀಲ್ ಸ್ಪೇಟ್ ಅವರನ್ನು ಐಸಿಸಿಯ ತಮ್ಮ ಪ್ರತಿನಿಧಿಗಳನ್ನಾಗಿ ಮುಂದಿನ ಎರಡು ವರ್ಷಕ್ಕೆ ಮುಂದುವರಿಸಲು, ಅಸೋಸಿಯೇಟ್ ಮತ್ತು ಮಾನ್ಯತೆ ಪಡೆದ ಸದಸ್ಯ ಸಂಸ್ಥೆಗಳು ತೀರ್ಮಾನಿಸಿವೆ.