ಅನಾಗೆ ನಿರಾಸೆ
ಸಬಿರ್ಯಾದ ಖ್ಯಾತ ಆಟಗಾರ್ತಿ ಅನಾ ಇವಾನೊವಿಚ್ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯಲ್ಲಿ ...
ಲಂಡನ್: ಸಬಿರ್ಯಾದ ಖ್ಯಾತ ಆಟಗಾರ್ತಿ ಅನಾ ಇವಾನೊವಿಚ್ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅನಾ 4-6, 6-3, 1-6 ಸೆಟ್‌ಗಳ ಅಂತರದಲ್ಲಿ ಎದುರಾಳಿ ಜರ್ಮನಿಯ ಸಬಿನೆ ಲಿಸಿಕಿ ವಿರುದ್ಧ ಮುಗ್ಗರಿಸಿದರು.
ಆರಂಭದಿಂದಲೇ ಅನಾ ವಿರುದ್ಧ ಒತ್ತಡ ಹಾಕುವಲ್ಲಿ ಯಶಸ್ವಿಯಾದ ಲಿಸಿಕಿ ಮೊದಲ ಸೆಟ್‌ನಲ್ಲಿ 6-4 ಅಂತರದ ಮುನ್ನಡೆ ಸಾಧಿಸಿದರು. ನಂತರ ಹೋರಾಟದ ಪ್ರದರ್ಶನ ನೀಡಿದ ಅನಾ 6-3 ಅಂತರ ಕಂಡುಕೊಳ್ಳುವ ಮೂಲಕ ಲಿಸಿಕಿಗೆ ತಿರುಗೇಟು ನೀಡಿದರು. ನಂತರ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಅನಾ ನಿಯಂತ್ರಣ ಸಾಧಿಸಲು ಅವಕಾಶ ನೀಡದ ಲಿಸಿಕಿ, ಅದ್ಭುತ ಪ್ರದರ್ಶನ ನೀಡುವ ಮೂಲಕ 6-1 ಅಂತರದ ಮುನ್ನಡೆ ಪಡೆದು ಗೆಲವಿನ ಹೆಜ್ಜೆ ಹಾಕಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ 6-3, 6-3, 6-4 ನೇರ ಸೆಟ್‌ಗಳ ಅಂತರದಲ್ಲಿ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ. ವಾವ್ರಿಂಕಾ ತಮ್ಮ ಉತ್ತಮ ಲಯವನ್ನು ಮುಂದುವರಿಸಿದ್ದು, ಎದುರಾಳಿಗೆ ಪಂದ್ಯದ ಯಾವುದೇ ಹಂತದಲ್ಲೂ ನಿಯಂತ್ರಣ ಸಾಧಿಸುವ ಅವಕಾಶ ನೀಡಲಿಲ್ಲ. ಈ ಮೂಲಕ ವಾವ್ರಿಂಕಾ ಮುಂದಿನ ಸುತ್ತಿಗೆ ಲಗ್ಗೆ ಹಾಕಿದ್ದಾರೆ.
ಪುರುಷರ ವಿಭಾಗದ ಮತ್ತೊಂದು ರೋಚಕ ಹಣಾಹಣಿಯಲ್ಲಿ ಸ್ಪೇನ್ ತಂಡದ ಆಟಗಾರ ಫೆಲಿಸಿಯಾನೊ ಲೊಪೆಜ್ 6-7 (8-10), 7-6 (8-6), 7-6 (7-3), 7-5 ಸೆಟ್‌ಗಳ ಅಂತರದಲ್ಲಿ ಅಮೆರಿಕದ ಜಾನ್ ಐಸ್ನರ್ ವಿರುದ್ಧ ಪ್ರಯಾಸದ ಗೆಲವು ದಾಖಲಿಸಿದರು.
ಮಹಿಳೆಯರ ವಿಭಾಗದ ಇತರೆ ಪಂದ್ಯದಲ್ಲಿ ಕೆನಾಡಾದ ಯುಗೇನಿ ಬುಚರ್ಡ್ ತಮ್ಮ ಎದುರಾಳಿ ಫ್ರಾನ್ಸ್‌ನ ಅಲಿಜೆ ಕೊರ್ನೆಟ್ ವಿರುದ್ಧ 7-6 (7-5), 7-5 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ತಮ್ಮ ಎದುರಾಳಿ ಚೀನಾದ ಶುಯ್ ಪೆಂಗ್ ವಿರುದ್ಧ 6-3, 6-2 ಸೆಟ್‌ಗಳ ಅಂತರದಲ್ಲಿ ಗೆಲವಿನ ಕೇಕೆ ಹಾಕಿದರು.