ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಮುಕುಟ
ದುಬೈ: ದಕ್ಷಿಣ ಆಫ್ರಿಕನ್ನರು ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಇಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ಗಳಿಂದ ಪಾಕಿಸ್ತಾನವನ್ನು ಸದೆಬಡಿದು ಈ ಸಾಧನೆ ಮಾಡಿದರು. ಆ ಮೂಲಕ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಹಿರಿಮೆಗೆ ದಕ್ಷಿಣ ಆಫ್ರಿಕಾ ಭಾಜನವಾಗಿದೆ.
ಗೆಲ್ಲಲು 132 ರನ್ಗಳ ಸಾಧಾರಣ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ಇನ್ನೂ 47 ಎಸೆತಗಳು ಉಳಿದಿರುವಂತೆಯೇ 4 ವಿಕೆಟ್ ನಷ್ಟಕ್ಕೆ 134 ರನ್ಗಳಿಸಿ ಈ ಐತಿಹಾಸಿಕ ಸಾಧನೆ ಮಾಡಿತು.
ಆರಂಭಿಕ ಏಡೆನ್ ಮಾರ್ಕರಾಮ್ ಅರ್ಧಶತಕ (ಅಜೇಯ 66, 125 ಎಸೆತ, 6 ಬೌಂಡರಿ) ಮತ್ತು ಗ್ರೇಗ್ ಓಲ್ಡ್ಫೀಲ್ಡ್ರ ಉಪಯುಕ್ತ 40 ರನ್ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲವಿನ ದಡ ಸೇರಿತು. ಪಾಕಿಸ್ತಾನದ ಬೌಲಿಂಗ್ ಸಹ ಹೆಚ್ಚು ಪರಿಣಾಮಕಾರಿಯಿಂದ ಕೂಡಿರಲಿಲ್ಲ.
ಪಾಕ್ಗೆ ಆಫ್ರಿಕಾ ಕಡಿವಾಣ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 44.3 ಓವರುಗಳಲ್ಲಿ 131 ರನ್ಗಳಿಸಲಷ್ಟೇ ಶಕ್ತವಾಯಿತು.
ಒಂಬತ್ತನೇ ಕ್ರಮಾಂಕದಲ್ಲಿ ಆಡಲಿಳಿದ ಅಮದ್ ಬಟ್ (37ರನ್, 54 ಎಸೆತ, 4 ಬೌಂಡರಿ) ಹಾಗೂ ಎಂಟನೇ ಕ್ರಮಾಂಕದಲ್ಲಿ ಬಂದ ಝಾಫರ್ ಗೋಹರ್ (22ರನ್, 44 ಎಸೆತ, 2 ಬೌಂಡರಿ) ಸ್ವಲ್ಪ ಪ್ರತಿರೋಧ ತೋರಿ ಉತ್ತಮ ರನ್ಗಳಿಸದೇ ಇದ್ದಲ್ಲಿ ಪಾಕಿಸ್ತಾನ ನೂರರ ಗಡಿ ತಲುಪುವುದೂ ಕಷ್ಟವಾಗಿತ್ತು.
ಆಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳ ಪೈಕಿ ಯಾರೊಬ್ಬರೂ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲಲಿಲ್ಲ. ಮೊತ್ತ72 ರನ್ಗಳಾಗುತ್ತಲೇ ತಂಡ 7 ವಿಕೆಟ್ ಕಳೆದುಕೊಂಡು ದಯನೀಯ ಕುಸಿತದಲ್ಲಿತ್ತು.
ದಕ್ಷಿಣ ಆಫ್ರಿಕಾ ಪರ ಉತ್ತಮ ದಾಳಿ ನಡೆಸಿದ ಕಾರ್ಬಿನ್ ಬಾಶ್ 4 ಹಾಗೂ ಯಾಸಿನ್ ವಾಲಿ ಮತ್ತು ಜಸ್ಟಿನ್ ಡಿಲ್ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 44.3 ಓವರುಗಳಲ್ಲಿ 131 (ಅಮದ್ ಬಟ್ ಅಜೇಯ 37, ಝಾಫರ್ ಗೋಹರ್ 22, ಕಾರ್ಬಿನ್ ಬಾಶ್ 15ಕ್ಕೆ4, ಯಾಸಿನ್ ವಾಲಿ 19ಕ್ಕೆ2, ಜಸ್ಟಿನ್ ಡಿಲ್ 29ಕ್ಕೆ2). ದಕ್ಷಿಣ ಆಫ್ರಿಕಾ 42.1 ಓವರುಗಳಲ್ಲಿ 4 ವಿಕೆಟ್ಗೆ 134 (ಏಡೆನ್ ಮಾರ್ಕರಾಮ್ ಅಜೇಯ 66, ಗ್ರೇಗ್ ಓಲ್ಡ್ಫೀಲ್ಡ್ 40, ಕರಾಮತ್ ಅಲಿ 24ಕ್ಕೆ2).