ಪ್ರೀಕ್ವಾಟರ್‌ಗೆ ಕರ್ನಾಟಕ ತಂಡ
ನವದೆಹಲಿ: ಪ್ರಬಲ ಹೋರಾಟದ ನಡುವೆಯೂ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಆಟಗಾರರು 64ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪ್ರೀಕ್ವಾಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶನಿವಾರ ಇಲ್ಲಿನ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ ಗೆಲವು ದಾಖಲಿಸಿದೆ. ಪಂದ್ಯ ಹೆಚ್ಚು ರೋಚಕವಾಗಿದ್ದ ಪರಿಣಾಮ ಕರ್ನಾಟಕ ತಂಡ 101-96 (30-26, 27-23, 18-24, 26-23) ಅಂಕಗಳ ಅಂತರದಲ್ಲಿ ಮಹಾರಾಷ್ಟ್ರವನ್ನು ಮಣಿಸಿತು. ಕರ್ನಾಟಕ ತಂಡದ ಪರ ಅರವಿಂದ್ 44, ಶ್ರೀನಿವಾಸ್ ನಾಯಕ್ 17, ಧೀರಜ್ 13, ರಾಜೇಶ್ 12 ಅಂಕಗಳನ್ನು ಪಡೆದು ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹಾರಾಷ್ಟ್ರ ತಂಡದ ಪರ ಎ.ಕೆ ಗಾಲೊಟ್ 33, ಸಿದ್ಧಮ್ ಶಿಂದೆ 30, ಕಾರ್ತಿಕ್ 18 ಅಂಕ ಪಡೆದರು. ಇನ್ನು ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡವು ಪಶ್ಚಿಮ ಬಂಗಾಳ ವಿರುದ್ಧ 75-67 (10-20, 17-16, 21-10, 27-21) ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದೆ.
ಕರ್ನಾಟಕದ ಪರ ಕೃತಿಕಾ ಲಕ್ಷ್ಮಣ್ 26, ರೋಶಮಿ ರೋಸ್ 14, ಸಾಗರಿಕಾ ಶ್ಯಾಮ್ 14 ಅಂಕ ದಾಖಲಿಸಿದರು. ಪಶ್ಚಿಮ ಬಂಗಾಳದ ಪರ ಸುಕುರ್ಮೊನಿ ಒರಮ್ 21, ವರ್ಷಾ ವರ್ಮಾ 15, ಸಲ್ಮಾ ದೇವಿ 11 ಅಂಕಗಳನ್ನು ಪಡೆದರು.