ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಿಎಫ್‌ಸಿಗೆ ಸೋಲಿನ ಕಹಿ

ಐ-ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ...

Mainashree
Updated On : 1 Mar 2014, 9:58 am

ಶಿಲ್ಲಾಂಗ್: ಐ-ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವನ್ನು 19ನೇ ಸುತ್ತಿನ ಪಂದ್ಯದಲ್ಲಿ ರಂಗದಾಜಿದ್ ತಂಡ 2-3 ಗೋಲುಗಳ ಅಂತದಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು.
ಇದು ಈ ಬಾರಿ ಐ-ಲೀಗ್ ಪಂದ್ಯಾವಳಿ ತುಂಬಾ ಸ್ಪರ್ಧಾತ್ಮಕವಾಗಿ ಕೂಡಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಸ್ಟೀವೆನ್ ದಿಯಾಸ್ ಮತ್ತು ಟಿ. ಲಾಲ್ನುಪುಯಾ ಅವರು ಮೊದಲಾರ್ಧ ಪಂದ್ಯದಲ್ಲಿ ಗೋಲು ದಾಖಲಿಸುವ ಮೂಲಕ ರಂಗದಾಜೀದ್ ತಂಡ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ ದ್ವಿತೀಯಾರ್ಧದಲ್ಲಿ ಮತ್ತೊಂದು ಗೋಲು ದಾಖಲಿಸಿದ ರಾಂಟಿ ಮಾರ್ಟಿನ್ ಆತಿಥೇಯರ ಜಯಕ್ಕೆ ಕಾರಣರಾದರು.
ಈ ಜಯದೊಂದಿಗೆ ರಂಗದಾಜೀದ್, ಪಂದ್ಯಾವಳಿಯಲ್ಲಿ ಒಟ್ಟು 3ನೇ ವಿಜಯ ದಾಖಲಿಸಿತು.ಉಭಯ ತಂಡಗಳೂ ಆರಂಭದಲ್ಲಿ ನಿಧಾನಗತಿಯ ಪ್ರದರ್ಶನ ತೋರಿದವು. ಆದಾಗ್ಯೂ, ಎರಡೂ ತಂಡಗಳು ಮೊದಲ 12 ನಿಮಿಷಗಳಲ್ಲೇ ಎರಡು ಬಾರಿ ಗೋಲು ದಾಖಲಿಸುವ ಅವಕಾಶ ಗಿಟ್ಟಿಸಿದ್ದವು. ಯುನೈಟೆಡ್ ಎಸ್‌ಸಿಯಿಂದ ರಂಗದಾಜಿದ್‌ಗೆ ಸೇರ್ಪಡೆಗೊಂಡ ರಾಂಟಿ ಮಾರ್ಟಿನ್ ಇದೇ ಮೊದಲ ಬಾರಿಗೆ ಅಂಗಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದರಾದರೂ, ಆತಿಥೇಯ ತಂಡಕ್ಕೆ ಮೊದಲು ಮುನ್ನಡೆ ತಂದುಕೊಟ್ಟಿದ್ದು 15ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಸ್ಟೀವೆನ್ ದಿಯಾಸ್. ನಂತರ 15 ನಿಮಿಷಗಳ ಕಾಲ ರಾಂಟಿ ಮತ್ತು ದಿಯಾಸ್ ಒಟ್ಟಾಗಿ ಪ್ರದರ್ಶನ ನೀಡುವುದರೊಂದಿಗೆ, ವೇಗವಾಗಿ ಚೆಂಡನ್ನು ಪಾಸ್ ಮಾಡುವ ಮೂಲಕ ಪ್ರವಾಸಿ ಬೆಂಗಳೂರು ತಂಡಕ್ಕೆ ಅಚ್ಚರಿ ಮೂಡಿಸಿದರು. ನಂತರ ಪಂದ್ಯದ 31ನೇ ನಿಮಿಷದಲ್ಲಿ ದಿಯಾಸ್ ಅವರು ಪಾಸ್ ಮಾಡಿದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದ ಲಾಲ್ನುಪಿಯಾ ಅವರು ಆತಿಥೇಯ ತಂಡ 2-0 ಅಂತರದಿಂದ ಮುನ್ನಡೆ ಕಂಡುಕೊಳ್ಳುವಂತೆ ನೋಡಿಕೊಂಡರು.
ಬೆಂಗಳೂರು ತಂಡ ನಿರಂತರವಾಗಿ ತಕ್ಕ ಹೋರಾಟ ನೀಡಿತಾದರೂ, ಆತಿಥೇಯ ತಂಡಕ್ಕೆ ಅದನ್ನು ಮೀರಿದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಸಮರ್ಥ ಹೋರಾಟಕ್ಕೆ ಮುಂದಾದ ಬೆಂಗಳೂರು ತಂಡ ತವರಿನ ತಂಡಕ್ಕೆ ಸೂಕ್ತ ತಿರುಗೇಟು ನೀಡಿತ್ತು. ದಿಯಾಸ್ ಪಂದ್ಯದ 50ನೇ ನಿಮಿಷದಲ್ಲಿ ರಂಗದಾಜಿದ್ ಪರ ಗೋಲು ದಾಖಲಿಸುವ ಸನಿಹದಲ್ಲಿದ್ದರು. ಆದರೆ, ಬೆಂಗಳೂರು ಗೋಲ್ ಕೀಪರ್ ಪವನ್ ಕುಮಾರ್ ಆ ಸಂದರ್ಭದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯ ಬಾರ್ ಮೇಲೆ ಕಳುಹಿಸುವಲ್ಲಿ ಯಶಸ್ವಿಯಾದರು. ನಂತರ 52ನೇ ನಿಮಿಷದಲ್ಲಿ ಸೀನ್ ರೂನಿ ಅವರು ಬಲಬದಿಯಿಂದು ಗೋಲು ದಾಖಲಿಸುವುದರಿಂದ ಸ್ವಲ್ಪದರಲ್ಲೇ ಅವಕಾಶ ಕೈಚೆಲ್ಲಿದರು. ಆದರೆ, ಅದಾಗಿ 8 ನಿಮಿಷಗಳ ನಂತರ ಬೆಂಗಳೂರು ತಂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 60ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಸುನಿಲ್ ಛೆಟ್ರಿ, ಪ್ರವಾಸಿ ತಂಡದಲ್ಲಿ ಕೊಂಚ ನೆಮ್ಮದಿ ಉಂಟಾಗುವಂತೆ ಮಾಡಿದ್ದರು.ಛೆಟ್ರಿ ಗೋಲು ದಾಖಲಿಸಿ ಕೇವಲ 1 ನಿಮಿಷಕ್ಕೆ ಬೆಂಗಳೂರು ತಂಡಕ್ಕೆ ಸೀನ್ ರೂನಿ ಮತ್ತೊಂದು ಗೋಲು ತಂದುಕೊಟ್ಟರು. ಇದರೊಂದಿಗೆ ಪ್ರವಾಸಿ ತಂಡ 2-2 ಗೋಲುಗಳಿಂದ ಸಮಬಲ ಸಾಧಿಸಿ ನಿಟ್ಟುಸಿರು ಬಿಡುವಂತೆ ಮಾಡಿತು. ಆತಿಥೇಯ ತಂಡದ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ, ಕಿಮ್ ಸಾಂಗ್ ಯಂಗ್ ತಲೆಯಿಂದ ನಿಯಂತ್ರಿಸಿದ ಚೆಂಡನ್ನು, ರಾಂಟಿ ಅವರು 76ನೇ ನಿಮಿಷದಲ್ಲಿ ಗೋಲ್ ಪೆಟ್ಟಿಗೆಗೆ ಸೇರಿಸಿದರು. ನಂತರ ಉಭಯ ತಂಡಗಳು ಗೋಲ್ ದಾಖಲಿಸಲು ಹೆಚ್ಚಿನ ಪ್ರಯಾಸಪಟ್ಟರೂ ಯಶಸ್ವಿಯಾಗಲಿಲ್ಲ. ರಾಂಟಿ ಮಾರ್ಟಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement