ಕನ್ನಡಿಗರ ರಭಸಕ್ಕೆ ಕೇರಳ ಪಡೆ ತತ್ತರ
ಆರಂಭಿಕ ರಾಬಿನ್ ಉತ್ತಪ್ಪರ ಸ್ಫೋಟಕ ಶತಕ ಹಾಗೂ ನಾಯಕ ಆರ್. ವಿನಯ್‌ಕುಮಾರ್ ಅವರ ಮಿಂಚಿನ ದಾಳಿ ನೆರವಿನಿಂದ ಕರ್ನಾಟಕ ತಂಡ ಸುಬ್ಬಯ್ಯ ಪಿಳ್ಳೈ ...
ಬೆಂಗಳೂರು: ಆರಂಭಿಕ ರಾಬಿನ್ ಉತ್ತಪ್ಪರ ಸ್ಫೋಟಕ ಶತಕ ಹಾಗೂ ನಾಯಕ ಆರ್. ವಿನಯ್‌ಕುಮಾರ್ ಅವರ ಮಿಂಚಿನ ದಾಳಿ ನೆರವಿನಿಂದ ಕರ್ನಾಟಕ ತಂಡ ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಗೆಲವು ದಾಖಲಿಸಿದೆ. ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 104 ರನ್‌ಗಳ ಭಾರಿ ಅಂತರದಲ್ಲಿ ಕೇರಳ ತಂಡವನ್ನು ಪರಾಭವಗೊಳಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕರ್ನಾಟಕ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ರಾಬಿನ್ ಉತ್ತಪ್ಪ 104 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಹೊಂದಿದ್ದ 104 ರನ್ ಸಿಡಿಸಿ ತಂಡದ ಮೊತ್ತ ತ್ರಿಶತಕದ ಗಡಿ ದಾಟಲು ಕಾರಣರಾದರು.
ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (60ರನ್, 35 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ಕೆ.ಎಲ್. ರಾಹುಲ್ (51ರನ್, 65 ಎಸೆತ, 1 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸಿ ತಂಡದ ಮೊತ್ತ ಹಿಗ್ಗುವಂತೆ ಮಾಡಿದರು. ಅಲ್ಲದೆ, ಮತ್ತೊಬ್ಬ ಆರಂಭಿಕ ಮಾಯಾಂಕ್ ಅಗರ್‌ವಾಲ್ (39) ಮತ್ತು ಮನೀಷ್ ಪಾಂಡೆ (39) ಸಹ ಉಪಯುಕ್ತ ಕಾಣಿಕೆ ನೀಡಿ ತಂಡದ ಬ್ಯಾಟಿಂಗ್‌ನಲ್ಲಿ ಪ್ರಭುತ್ವ ಸ್ಥಾಪಿಸುವಂತೆ ನೋಡಿಕೊಂಡರು.
ಅದರಲ್ಲೂ ಕೇರಳದ ದಾಳಿಯನ್ನು ಪುಡಿಗಟ್ಟಿದ ಉತ್ತಮ ಮೈದಾನದ ಪ್ರತಿಮೂಲೆಗೂ ಚೆಂಡನ್ನು ದಂಡಿಸುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಉತ್ತಪ್ಪ ಮತ್ತು ಅಗರ್‌ವಾಲ್ 14 ಓವರುಗಳಲ್ಲಿ 85 ರನ್ ಸೇರಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಹಾಗಾಗಿ, ನಂತರ ಬಂದ ಬ್ಯಾಟ್ಸ್‌ಮನ್‌ಗಳ ಮೇಲಿನ ಭಾರ ಕಡಿಮೆಯಾಗುವುದರೊಂದಿಗೆ ಅಂತಿಮವಾಗಿ ತಂಡದ ಮೊತ್ತ ಉತ್ತಮ ಗಳಿಕೆಗೆ ಬಂದು ನಿಂತಿತು. ಕೇರಳದ ಪರ ಪ್ರಶಾಂತ್ ಪರಮೇಶ್ವರನ್ ಮಾತ್ರ ಎರಡು ವಿಕೆಟ್ ಉರುಳಿಸಲು ಸಫಲರಾದರು.
ವಿನಯ್ ದಾಳಿಗೆ ಕೇರಳ ತತ್ತರ
ಕಠಿಣ ಗುರಿ ಬೆಂಬತ್ತಿದ ಕೇರಳ ತಂಡ 46.2 ಓವರುಗಳಲ್ಲಿ 213 ರನ್‌ಗಳಿಸಲಷ್ಟೇ ಶಕ್ತವಾಯಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ರೋಹನ್ ಪ್ರೇಮ್ (103ರನ್, 100 ಎಸೆತ, 10 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ನೆರವಿನಿಂದ ತಂಡದಲ್ಲಿ ಗೆಲವಿನ ಆಸೆ ತುಂಬಿದ್ದರು. ಆದರೆ, ಮತ್ತೊಂದು ತುದಿಯಲ್ಲಿನ ವಿಕೆಟ್‌ಗಳು ಒಂದರ ಮೇಲೊಂದರಂತೆ ಉರುಳಿದ ಪರಿಣಾಮ ಹೋರಾಟದ ಮುನ್ನವೇ ಕೇರಳ ಪಡೆ ಸೋಲೊಪ್ಪಿಕೊಂಡಂತಾಯಿತು.
ಮುಖ್ಯವಾಗಿ ಕರ್ನಾಟಕದ ಪರ ಮಧ್ಯಮ ವೇಗಿ ವಿನಯ್‌ಕುಮಾರ್‌ರ ಅಪಾಯಕಾರಿ ಎಸೆತಗಳಿಗೆ ಮೈಯೊಡ್ಡಿ ನಿಲ್ಲಲು ಪ್ರವಾಸಿ ದಾಂಡಿಗರಿಗೆ ಸಾಧ್ಯವಾಗಲಿಲ್ಲ. ವಿನಯ್ ಒಟ್ಟು 5 ವಿಕೆಟ್ ಉರುಳಿಸಿ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಶ್ರೀನಾಥ್ ಅರವಿಂದ್ ಮತ್ತು ಅಮಿತ್ ವರ್ಮಾ ಸಹ ಶಿಸ್ತಿನ ದಾಳಿ ಸಂಘಟಿಸಿ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲವಿನೊಂದಿಗೆ ಕರ್ನಾಟಕ 4 ಅಂಕಗಳನ್ನು ಖಾತೆಗೆ ಸೇರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 50 ಓವರುಗಳಲ್ಲಿ 5 ವಿಕೆಟ್‌ಗೆ 317 (ರಾಬಿನ್ ಉತ್ತಪ್ಪ 104, ಕರುಣ್ ನಾಯರ್ 60, ಕೆ.ಎಲ್. ರಾಹುಲ್ 51, ಮಾಯಾಂಕ್ ಅಗರ್‌ವಾಲ್ 39, ಮನೀಷ್ ಪಾಂಡೆ 39, ಪ್ರಶಾಂತ್ ಪರಮೇಶ್ವರನ್ 57ಕ್ಕೆ2). ಕೇರಳ 46.2 ಓವರುಗಳಲ್ಲಿ 213 (ರೋಹನ್ ಪ್ರೇಮ್ 103, ರಾಬರ್ಟ್ ಫರ್ನಾಂಡೀಜ್ 32, ಆರ್. ವಿನಯ್‌ಕುಮಾರ್ 34ಕ್ಕೆ5, ಅಮಿತ್ ವರ್ಮಾ 34ಕ್ಕೆ2, ಶ್ರೀನಾಥ್ ಅರವಿಂದ್ 46ಕ್ಕೆ2).