ಬೀಳ್ಕೊಡುಗೆಯಲ್ಲಿ ಮಹತ್ವದ ಹೆಸರುಗಳು ಮರೆಯದಿರಲು ನಿರ್ಧರಿಸಿದ್ದೆ
ಮುಂಬೈ: ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಮಾನಿಗಳ ಕಣ್ಣಲ್ಲಿ ನೀರು ಬರುವಂತಹ ಭಾಷಣ ಮಾಡಿದ್ದ ಸಚಿನ್ ತೆಂಡೂಲ್ಕರ್, ಆ ಭಾಷಣದಲ್ಲಿ ಮಹತ್ವದ ಹೆಸರುಗಳನ್ನು ಮರೆಯದಂತೆ ಹೇಳುವುದು ಅವರ ಉದ್ದೇಶವಾಗಿತ್ತು ಎಂದಿದ್ದಾರೆ.
ಮುಂಬೈನಲ್ಲಿ ನಡೆದ ತಮ್ಮ ಅಂತಿಮ ಟೆಸ್ಟ್ ಪಂದ್ಯದ ನಂತರ ಸಚಿನ್ 20 ನಿಮಿಷಗಳ ಕಾಲ ಮಾತನಾಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಎಲ್ಲರನ್ನೂ ನೆನೆದಿದ್ದ ಸಚಿನ್, ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಅಭಿಮಾನಿಗಳು ಭಾವುಕರಾಗುವಂತೆ ಮಾಡಿದ್ದರು. ತಮ್ಮ ಕೊನೆಯ ಟೆಸ್ಟ್ ಪಂದ್ಯಕ್ಕಿಂತ ಮುನ್ನ ಕೋಲ್ಕತಾದಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಮುಂಬೈಗೆ ಪ್ರಯಾಣಿಸುವಾಗ ವಿಮಾನದಲ್ಲಿ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಂಡಿದ್ದಾಗಿ ಸಚಿನ್ ಬಹಿರಂಗಪಡಿಸಿದ್ದಾರೆ. ನಾನು ಕೋಲ್ಕತಾದಿಂದ ಮುಂಬೈಗೆ ವಾಪಸಾಗುತ್ತಿದ್ದೆ. ಅಲ್ಲದೆ, ಇದು ನನ್ನ ಕೊನೆಯ ಟೆಸ್ಟ್ ಪಂದ್ಯ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೆ. ನಾನು ಏಕಾಂಗಿಯಾಗಿ ಕುಳಿತು ವಿಚಾರ ಮಾಡಿದ್ದೆ. ಅಲ್ಲದೆ, ಭಾಷಣದಲ್ಲಿ ಏನೇನು ಮಾತನಾಡಬೇಕು ಎಂಬುದನ್ನು ನಾನು ಆಗಲೇ ನಿರ್ಧರಿಸಿದೆ. ಅಂದುಕೊಂಡಂತೆ ಪಂದ್ಯ ಮುಕ್ತಾಯವಾಗಿತ್ತು. ಅಪಾರ ಅಭಿಮಾನಿಗಳು ನನ್ನ ಎದುರಿಗೆ ನಿಂತಿದ್ದರು. ಆಗ ಇಡೀ ಜಗತ್ತು ನನ್ನ ಮಾತು ಕೇಳಲು ಕಾತರದಿಂದ ಕಾದಿತ್ತು. ಅಂತಹ ಸಂದರ್ಭದಲ್ಲಿ ಮಹತ್ವದ ಹೆಸರುಗಳು ನನ್ನೊಂದಿಗೆ ನಿರ್ವಹಿಸಿದ ಪಾತ್ರವನ್ನು ಹಂಚಿಕೊಂಡೆ ಎಂದು ಸಚಿನ್ ತಿಳಿಸಿದರು.