ಪಾಕ್‌ಗೆ ಬಾಗಿದ ಬಾಂಗ್ಲಾ
ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಏಷ್ಯಾಕಪ್...
ಮೀರ್‌ಪುರ: ಆಲ್ರೌಂಡರ್ ಶಾಹಿದ್ ಅಫ್ರಿದಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಏಷ್ಯಾಕಪ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ರೋಚಕ ಗೆಲವು ದಾಖಲಿಸಿದೆ.
ಮಂಗಳವಾರ ಶೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 3 ವಿಕೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿ, ಫೈನಲ್‌ಗೆ ಲಗ್ಗೆ ಹಾಕಿತು. ಈ ಮೂಲಕ ಭಾರತ ತಂಡದ ಫೈನಲ್ ಹಾದಿ ಸಂಪೂರ್ಣವಾಗಿ ಮುಚ್ಚಿತು.
ಟಾಸ್ ಗೆದ್ದ ಆತಿಥೇಯ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ 50 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 326 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್‌ಗಳಲ್ಲಿ 7 ವಿಕೆಟ್‌ಗೆ 329 ರನ್ ಕಲೆ ಹಾಕಿತು. ಇದು ಪಾಕಿಸ್ತಾನ ಯಶಸ್ವಿಯಾಗಿ ಬೆನ್ನಟ್ಟಿದ ಗರಿಷ್ಠ ಮೊತ್ತವಾಗಿದೆ.
ಅಬ್ಬರಿಸಿದ ಅನಾಮುಲ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಬಾಂಗ್ಲಾದೇಶಕ್ಕೆ ಆರಂಭಿಕರಾದ ಅನಾಮುಲ್ ಹಕ್(100 ರನ್, 132 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಇಮ್ರುಲ್ ಕಯಾಸ್(59 ರನ್, 75 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರಿಂದ ಅತ್ಯುತ್ತಮ ಆರಂಭವನ್ನೇ ಪಡೆಯಿತು.
ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 150 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟರು. ಅಲ್ಲದೆ ತಂಡ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಲು ಬಲ ನೀಡಿದರು.
ನಂತರ ಬಂದ ಮೊಮಿನುಲ್ ಹಕ್(51), ನಾಯಕ ಮುಶ್ಫಿಕರ್ ರಹೀಮ್(ಅಜೇಯ 51) ಹಾಗೂ ಶಕಿಬ್ ಅಲ್ ಹಸನ್(ಅಜೇಯ 44) ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಈ ಮೂಲಕ ಬಾಂಗ್ಲಾ ಬೃಹತ್ ಮೊತ್ತ ಪೇರಿಸಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ಅಹ್ಮದ್ ಶೆಹಜಾದ್(103) ಹಾಗೂ ಮೊಹಮದ್ ಹಫೀಜ್(52) 97 ರನ್‌ಗಳ ಉತ್ತಮ ಆರಂಭವನ್ನೇ ನೀಡಿತು. ನಂತರ ಮಿಸ್ಬಾ ಉಲ್ ಹಕ್(4) ಹಾಗೂ ಮಕ್ಸೂದ್(2) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಆಗ ಬಂದ ಶಾಹಿದ್ ಅಫ್ರಿದಿ ಪಂದ್ಯದ ಗತಿಯನ್ನೇ ಬದಲಿಸಿದರು. 25 ಎಸೆತಗಳನ್ನು ಎದುರಿಸಿದ ಅಫ್ರಿದಿ, 2 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 59 ರನ್ ದಾಖಲಿಸಿದರು. 18ನೇ ಎಸೆತದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಅಫ್ರಿದಿ ವಿಶ್ವ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ದಾಖಲಿಸಿದ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಅಫ್ರಿದಿಗೆ ಸಾಥ್ ನೀಡಿದ ಫಾವದ್ ಅಲಮ್ ಅಜೇಯ 70 ರನ್ ದಾಖಲಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರೆಹಮಾನ್‌ಗೆ ನಿಷೇಧ: ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುವಾಗ ದಾಳಿಗಿಳಿದ ಅಬ್ದುರ್ ರೆಹಮಾನ್ ಅವರನ್ನು ಕಾನೂನು ಬಾಹೀರ ಎಸೆತದ ಕಾರಣ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಯಿತು. 11ನೇ ಓವರ್‌ನಲ್ಲಿ ದಾಳಿಗಿಳಿದ ರೆಹಮಾನ್, ಸತತ ಮೂರು ಬಾರಿ ಬೀಮರ್(ಕಾನೂನು ಬಾಹೀರ ಫುಲ್‌ಟಾಸ್) ಎಸೆತ ಮಾಡಿದ ಹಿನ್ನಲೆಯಲ್ಲಿ ಅವರು ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಯಿತು. ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 326
(ಅನಾಮುಲ್ ಹಕ್ 100, ಇಮ್ರುಲ್ ಕಯಾಸ್ 59, ಸಯೀದ್ ಅಜ್ಮಲ್ 61ಕ್ಕೆ2)
ಪಾಕಿಸ್ತಾನ 49.5 ಓವರ್‌ಗಳಲ್ಲಿ 7 ವಿಕೆಟ್‌ಗೆ 329
(ಅಹ್ಮದ್ ಶೆಹಜಾದ್ 103, ಫಾವದ್ ಅಲಮ್ 74, ಅಫ್ರಿದಿ 59, ಮೊಮಿನುಲ್ ಹಕ್ 37ಕ್ಕೆ2)