ಫುಟ್ಬಾಲ್: ಭಾರತಕ್ಕೆ ಬಾಂಗ್ಲಾ ಸವಾಲು
ಮಾರ್ಗೋವಾ: ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಬುಧವಾರ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಹೋರಾಟ ನಡೆಸಲು ಪರಸ್ಪರ ಕಾತರದಿಂದ ಕಾಯುತ್ತಿವೆ. ಕಳೆದ ಬಾರಿ ನೇಪಾಳದಲ್ಲಿ ನಡೆದ ಸ್ಯಾಫ್ ಕಪ್ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಎದುರಾದಾಗ 1-1 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಭಾರತ ತಂಡದಲ್ಲಿ ಕೆಲ ಬದಲಾವಣೆಗಳಾಗಿದ್ದು, ಸುಬ್ರತಾ ಪಾಲ್ ಮತ್ತು ಅಮರಿಂದರ್ ಸಿಂಗ್ ಇಬ್ಬರೂ ಗೋಲ್ ಕೀಪರ್‌ಗಳು ತಂಡಕ್ಕೆ ಮರಳಿದ್ದಾರೆ. ಇನ್ನು ರಕ್ಷಣಾ ವಿಭಾಗದಲ್ಲಿ ಸಂದೇಶ್ ಝಿಂಗನ್, ಮಿಡ್‌ಫೀಲ್ಡಿಂಗ್‌ನಲ್ಲಿ ಅಲ್ವೇನ್ ಜಾರ್ಜ್ ಮತ್ತು ಸ್ಟ್ರೈಕರ್‌ಗಳಲ್ಲಿ ಬಲ್ವಂತ್ ಸಿಂಗ್ ಅವರು ತಂಡಕ್ಕೆ ವಾಪಸಾಗಿದ್ದಾರೆ.
'ಸ್ಯಾಫ್ ಕಪ್‌ನಲ್ಲಿ ನಾವು ಈ ಹಿಂದೆ ಬಾಂಗ್ಲಾದೇಶದ ವಿರುದ್ಧ ನಾವು ಆಡಿದ್ದೇವೆ. ಆ ಪಂದ್ಯದಲ್ಲಿ ಸಮಬಲ ಸಾಧಿಸುವ ಮೂಲಕ ಎದುರಾಳಿಗೆ ಬಿಸಿ ಮುಟ್ಟಿಸಿದ್ದೇವೆ. ಹೀಗಾಗಿ ನಾವು ಪಂದ್ಯಕ್ಕಾಗಿ ತುಂಬಾ ಕಾತರದಿಂದ ಕಾದಿದ್ದೇವೆ' ಎಂದಿದ್ದಾರೆ ತಂಡದ ಕೋಚ್ ವಿಮ್ಸ್ ಕೋವರ್‌ಮನ್ಸ್.
ಬಾಂಗ್ಲಾ ಗೆ ಭಾರತ ವನಿತೆಯರ ತಂಡ
ಕೋಲ್ಕತಾ: ಭಾರತ ವನಿತೆಯರ ಕ್ರಿಕೆಟ್ ತಂಡ ಬಾಂಗ್ಲಾದೇಶದ ವನಿತೆಯರ ವಿರುದ್ಧ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಲಿದೆ.
ಮಾರ್ಚ್ 7ರಂದು ಭಾರತ ವನಿತೆಯರು ಢಾಕಾಕ್ಕೆ ತೆರಳಲಿದ್ದು, ಮಾರ್ಚ್ 9, 11 ಹಾಗೂ 13ರಂದು ಮೂರು ಟಿ20 ಪಂದ್ಯಗಳು ನಡೆಯಲಿವೆ. ಮಿಥಾಲಿ ರಾಜ್ ತಂಡದ ನಾಯಕಿಯಾಗಿದ್ದರೆ, ಪುರ್ಣಿಮಾ ರಾವ್ ಕೋಚ್ ಆಗಿ, ವಿದ್ಯಾ ಯಾದವ್ ಮ್ಯಾನೇಜರ್ ಆಗಿ ತಂಡದೊಂದಿಗೆ ಇದ್ದಾರೆ.
ಕರ್ನಾಟಕಕ್ಕೆ ಇಂದುತಮಿಳು ನಾಡು ಸವಾಲು
ಬೆಂಗಳೂರು: ಗೆಲವಿನ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕ ತಂಡಕ್ಕೆ ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ತಮಿಳುನಾಡು ತಂಡ ಸವಾಲು ನೀಡಲು ಸಿದ್ಧತೆ ನಡೆಸಿದೆ.
ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡಿನ ವಿರುದ್ಧ ಗೆಲವು ದಾಖಲಿಸುವತ್ತ ಸಿದ್ಧತೆ ನಡೆಸಿದೆ.
ಕರ್ನಾಟಕ ತಂಡ ಪ್ರಸಕ್ತ ಸಾಲಿನಲ್ಲಿ ಗೆಲವಿನ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು, ಅತ್ಯುತ್ತಮ ಲಯದಲ್ಲಿದೆ. ಇನ್ನು ತಮಿಳುನಾಡು ತಂಡವೂ ಸಹ ಬಲಿಷ್ಠ ತಂಡವಾಗಿದ್ದು, ಆತಿಥೇಯ ಕರ್ನಾಟಕ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಗಳಿವೆ.
ಚಿನ್ನಸ್ವಾಮಿ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ಹಿನ್ನಲೆಯಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಸಾಧಿಸಿದೆ.
ಇನ್ನು ತಮಿಳುನಾಡಿನಲ್ಲಿ ಬದ್ರಿನಾಥ್, ಮುರಳಿ ವಿಜಯ್, ಬಾಬಾ ಅಪರಾಜಿತ್, ವಿಜಯ್ ಶಂಕರ್ ಪ್ರಮುಖ ಬ್ಯಾಟ್ಸ್‌ಮನ್‌ಗಳಾದರೆ, ಲಕ್ಷ್ಮೀಪತಿ ಬಾಲಾಜಿ, ಮಹೇಶ್, ವಿಘ್ನೇಶ್, ಪ್ರಭು ಬೌಲಿಂಗ್ ವಿಭಾಗದ ಅಸ್ತ್ರಗಳಾಗಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಪಂದ್ಯ ಹೆಚ್ಚು ರೋಚಕತೆ ಹುಟ್ಟಿಸುವ ನಿರೀಕ್ಷೆ ಇದೆ.
ತಮಿಳುನಾಡು, ಪಂಜಾಬ್ ಫೈನಲ್‌ಗೆ
ನವದೆಹಲಿ: ತಮಿಳುನಾಡು ಮತ್ತು ಪಂಜಾಬ್ ತಂಡಗಳು 64ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಸುತ್ತು ತಲುಪಿವೆ.
ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡ 80-68 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ ಉತ್ತರಾಖಂಡ ವಿರುದ್ಧ ರೋಚಕ ಗೆಲವು ದಾಖಲಿಸಿ ಫೈನಲ್ ತಲುಪಿತು.
ಇಂದೇ ನಡೆದ ಮತ್ತೊಂದು ಸೆಮಿಫೈನಲ್ ಮುಖಾಬಲದಲ್ಲಿ ತಮಿಳುನಾಡು ಆಟಗಾರರು 92-85 ಅಂಕಗಳಿಂದ ಮಣಿಸಿ ಅಂತಿಮ ಸುತ್ತಿಗೆ ಹೆಜ್ಜೆ ಹಾಕಿತು.