ಮೈಸೂರಿನಲ್ಲಿ ಇಂದಿನಿಂದ ಮಹಿಳಾ ಹಾಕಿ
ಮೈಸೂರು: ಹಾಕಿ ಇಂಡಿಯಾ ಕಿರಿಯ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣ ಸಿದ್ಧಗೊಂಡಿದೆ.
ಕೆಲ ತಿಂಗಳ ಹಿಂದಷ್ಟೆ ಹೊಸ ಹಾಕಿ ಸಿಂಥೆಟಿಕ್ ಟರ್ಫ್ ಉದ್ಘಾಟನೆಗೊಂಡ ಬಳಿಕ ದಸರಾ ಅಂಗವಾಗಿ ನಡೆದ ರಾಷ್ಟ್ರೀಯ ಹಾಕಿ ಪಂದ್ಯಾವಳಿ ನಂತರ ಈಗ ಮತ್ತೊಂದು ಲೀಗ್-ಕಮ್- ನಾಕೌಟ್ ಮಾದರಿಯ ಪಂದ್ಯಕ್ಕೆ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ. ಎ ಮತ್ತು ಬಿ ಗುಂಪುಗಳಿಂದ ಒಟ್ಟು 32 ತಂಡಗಳು ಪಾಲ್ಗೊಳ್ಳಲಿವೆ. ಎಲ್ಲ ತಂಡಗಳ ಆಟಗಾರರಿಗೂ ಮೈಸೂರು ಕಾಂಪ್ಲೆಕ್ಸ್ ಹೊಟೇಲ್ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.
ಪಿಚ್ಗೆ ಮಂಗಳವಾರ ನೀರು ಸಿಂಪಡಿಸಿ ಸಿದ್ಧಗೊಳಿಸಲಾಯಿತು. ಎ ವಿಭಾಗದಲ್ಲಿ ಪ್ರಬಲವಾದ ಕಳೆದ ಬಾರಿಯ ವಿಜೇತ ಹರಿಯಾಣ ಮತ್ತು ರಾಂಚಿ ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದ್ದು, ಈ ಬಾರಿಯೂ ಇತರ ತಂಡಗಳಿಗೆ ಹರಿಯಾಣ ತಂಡ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಎ ವಿಭಾಗದಲ್ಲಿ ಕಳೆದ ಬಾರಿಯ ರನ್ನರ್ ಆಗಿದ್ದ ಮಧ್ಯಪ್ರದೇಶ ತಂಡವೂ ಸೇರಿದೆ. ಈ ಬಾರಿ ಒಡಿಶಾದ ಗಂಗಾಪುರ ಮತ್ತು ವಿದರ್ಭ ಹಾಕಿ ತಂಡಗಳು ಹೊಸದಾಗಿ ಭಾಗವಹಿಸುತ್ತಿವೆ. ಬಿ ಗುಂಪಿನಲ್ಲಿರುವ ಕರ್ನಾಟಕ ತಂಡ ಈ ಬಾರಿ ಜಯ ಗಳಿಸಿದರೆ ಎ ಗುಂಪಿಗೆ ಬಡ್ತಿ ಪಡೆಯಲಿದೆ. ಮಾ. 5ರಿಂದ 13ರವರೆಗೆ ಬಿ ಗುಂಪಿನ ಪಂದ್ಯಾವಳಿ, ಮಾ. 15ರಿಂದ ಎ ಗುಂಪಿನ ಪಂದ್ಯ ಜರುಗಲಿದೆ. ಮಾ. 5ಕ್ಕೆ ಛತ್ತೀಸ್ಗಢ ಮತ್ತು ಹಿಮಾಚಲಪ್ರದೇಶ ತಂಡಗಳು ಮುಖಾಮುಖಿಯೊಂದಿಗೆ ಪಂದ್ಯಾವಳಿ ಉದ್ಘಾಟನೆಗೊಂಡರೂ, ಅಧಿಕೃತವಾಗಿ ಗಣ್ಯರೊಂದಿಗೆ ಮಾ. 8ಕ್ಕೆ ಪಂದ್ಯಾವಳಿಯ ಉದ್ಘಾಟನೆ ಸಮಾರಂಭ ನೆರವೇರುವ ಸಾಧ್ಯತೆ ಇದೆ.