ಇಂದು ಲಂಕಾ-ಬಾಂಗ್ಲಾ ಆಟ
ಮೀರ್ಪುರ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಫೈನಲ್ ತಲುಪುವ ಎರಡೂ ತಂಡಗಳು ನಿರ್ಧಾರವಾಗಿರುವುದರಿಂದ ಬುಧವಾರ ನಡೆಯಲಿರುವ ಕೊನೆಯ ಲೀಗ್ ಸಮರಕ್ಕೆ ಮಹತ್ವ ಇಲ್ಲದಾಗಿದೆ.
ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಈ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಆತಿಥೇಯ ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಒಟ್ಟು 5 ತಂಡಗಳ ಅಂಕಪಟ್ಟಿಯಲ್ಲಿ ಶ್ರೀಲಂಕಾ ಒಟ್ಟು 13 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನದೊಂದಿಗೆ ಫೈನಲ್ ತಲುಪಿದೆ. ಪಾಕಿಸ್ತಾನ ಕೂಡ 13 ಅಂಕಗಳಿಸಿ ಎರಡನೇ ತಂಡವಾಗಿ ಪ್ರಶಸ್ತಿ ಸುತ್ತು ತಲುಪಿದೆ.
ತವರಿನ ಲಾಭ ಹೊಂದಿದ್ದ ಬಾಂಗ್ಲಾದೇಶ ಆಟಗಾರರು ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಸೋತು ಭಾರಿ ನಿರಾಸೆಗೊಂಡಿದ್ದಾರೆ. ಆದರೆ, ನಾಳಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ ಮೊದಲ ಜಯ ಸಾಧಿಸಿದ ನೆಮ್ಮದಿಯೊಂದಿಗೆ ಹೋರಾಟಕ್ಕೆ ತೆರೆ ಎಳೆದುಕೊಳ್ಳಲು ಬಾಂಗ್ಲಾ ಆಟಗಾರರು ಮನಸ್ಸು ಮಾಡಿದ್ದಾರೆ.