ಶೇ. 60ರಿಂದ 70 ಐಪಿಎಲ್ ಪಂದ್ಯಗಳು ಮಾತ್ರ ಭಾರತದಲ್ಲಿ
ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಶೇ. 60ರಿಂದ 70 ಪಂದ್ಯಗಳು ಮಾತ್ರ ಭಾರತದಲ್ಲಿ ನಡೆಯಲಿವೆ ಎಂದು ಐಪಿಎಲ್ ಮುಖ್ಯಸ್ಥ ರಂಜಿಬ್ ಬಿಸ್ವಾಲ್ ತಿಳಿಸಿದರು.
ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್, ಉಪಾದ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಸಂಜಯ್ ಪಟೇಲ್, ಬಿಸ್ವಾಲ್ ಹಾಗೂ ಐಪಿಎಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಂದರ್ ರಾಮನ್ ಸಭೆ ಸೇರಿ ಭಾರತದಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ.
ದೇಶೀಯ ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದ ಹೆಚ್ಚಿನ ಪಂದ್ಯಗಳನ್ನು ಭಾರತದಲ್ಲಿ ನಡೆಸವುದೇ ಪ್ರಮುಖ ಆದ್ಯತೆಯಾಗಿದೆ ಎಂದು ಬಿಸ್ವಾಲ್ ತಿಳಿಸಿದರು. 'ಈಗ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗಿದೆ. ಹೀಗಾಗಿ ಭಾರತದಲ್ಲಿ ಎಷ್ಟು ಪಂದ್ಯಗಳನ್ನು ನಡೆಸಬೇಕು ಎಂಬ ಕುರಿತು ಚಿಂತನೆ ನಡೆಸಿದ್ದೇವೆ. ಪಂದ್ಯಾವಳಿ ಆರಂಭವಾದಾಗಿನಿಂದಲೂ, ಹೆಚ್ಚಿನ ಪಂದ್ಯಗಳನ್ನು ಭಾರತದಲ್ಲಿ ನಡೆಸುವುದೇ ನಮ್ಮ ಪ್ರಮುಖ ಆದ್ಯತೆಯಾಗಿದೆ' ಎಂದು ಬಿಸ್ವಾಲ್ ಸುದ್ದಿಗಾರರಿಗೆ ತಿಳಿಸಿದರು.
'ವಿದೇಶದ ಸ್ಥಳಗಳ ಬಗ್ಗೆ ನಾವು ಇಂದು ಚರ್ಚೆ ನಡೆಸಿದೆವು. ಆದರೆ, ಯಾವ ದೇಶದಲ್ಲಿ ನಡೆಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಒಂದೆರಡು ದಿನಗಳಲ್ಲಿ ಈ ಕುರಿತು ಅಂತಿಮ ತೀರ್ಮಾನ ತಿಳಿಸುವುದಾಗಿ' ಅವರು ಹೇಳಿದರು. ಚುನಾವಣಾ ಆಯೋಗ ಬುಧವಾರ 16ನೇ ಲೋಕಸಭಾ ಚನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 16ರಂದು ಮತ ಎಣಿಕೆ ನಡೆಯಲಿದೆ. ಹಾಗಾಗಿ, ಆನಂತರದ ಪಂದ್ಯಗಳನ್ನು ಭಾರತಕ್ಕೆ ಸ್ಥಳಾಂತರಿಸಲಾಗುತ್ತದೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಾಂಗ್ಲಾದೇಶಗಳು ಐಪಿಎಲ್‌ನ 7ನೇ ಆವೃತ್ತಿಯ ಆತಿಥ್ಯ ವಹಿಸಿಕೊಳ್ಳುವ ಸ್ಪರ್ಧೆಯಲ್ಲಿವೆ.