ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾ ಕಪ್ ಮುಕುಟ ಯಾರ ಮುಡಿಗೆ?

Vishwanath S
Updated On : 8 Mar 2014, 12:48 pm

ಮೀರ್‌ಪುರ: ಹಾಲಿ ಚಾಂಪಿಯನ್ ಪಾಕಿಸ್ತಾನದ ಪಾಳಯದಲ್ಲಿ ಗಾಯದ ಸಮಸ್ಯೆ ತಲೆದೋರಿದ್ದು ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಾರಂಭಕ್ಕೆ ಮುಂಚೆಯೇ ಕೊಂಚ ಆತಂಕದಲ್ಲಿರುವಂತಾಗಿದೆ.
ಆದಾಗ್ಯೂ ಶಾಹಿದ್ ಅಫ್ರಿದಿ ಮತ್ತು ಉಮರ್ ಅಕ್ಮಲ್‌ಗೆ ಆಗಿರುವ ಗಾಯವೇನೂ ಗಂಭೀರವಲ್ಲ. ಫೈನಲ್ ಪಂದ್ಯದಲ್ಲಿ ಅವರು ಎಂದಿನ ದೈಹಿಕ ಸಕ್ಷಮತೆಯಲ್ಲಿಯೇ ಕಣಕ್ಕಿಳಿಯುತ್ತಿರುವುದರಿಂದ ನಮಗೆ ಚಿಂತೆಯಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಮಿಸ್ಬಾ-ಉಲ್- ಹಕ್ ಪ್ರತಿಕ್ರಿಯಿಸಿದ್ದಾರೆ.
ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಚಾಂಪಿಯನ್‌ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿವೆ.
ಪ್ರಸ್ತುತದ ಫಾರ್ಮ್ ಗಮನಿಸಿದರೆ, ಎರಡೂ ತಂಡಗಳು ಪ್ರಶಸ್ತಿಗೆ ಅರ್ಹ ಎನಿಸಿವೆ. ಅದರಲ್ಲೂ ಶ್ರೀಲಂಕಾ ಒಂದು ಹೆಜ್ಜೆ ಮುಂದಿದೆ ಅಂತಲೇ ಹೇಳಬಹುದು.
ಲೀಗ್ ಹಂತದಲ್ಲಿ ಆಡಿರುವ ಎಲ್ಲ ನಾಲ್ಕೂ ಪಂದ್ಯಗಳನ್ನು ಜಯಿಸಿರುವ ಶ್ರೀಲಂಕನ್ನರು ಸೋಲರಿಯದ ತಂಡವಾಗಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
ಆ್ಯಂಜೆಲೊ ಮ್ಯಾಥ್ಯೂಸ್ ಸಾರಥ್ಯದಲ್ಲಿರುವ ಲಂಕಾ ಪಾಳಯದಲ್ಲಿ ವಿಕೆಟ್ ಕೀಪರ್ ಕುಮಾರ ಸಂಗಕ್ಕಾರ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಅಪಾಯಕಾರಿ ವೇಗಿ ಲಸಿತ್ ಮಾಲಿಂಗ ಹಾಗೂ ಸ್ಪಿನ್ ಮಾಂತ್ರಿಕ ಅಜಂತಾ ಮೆಂಡಿಸ್ ಅಪಾಯ ಕಾರಿಯಾಗಿದ್ದಾರೆ.
ಮತ್ತೊಂದೆಡೆ ಪಾಕಿಸ್ತಾನ ಆಟಗಾರರು ಸಾಂಘಿಕ ಪ್ರದರ್ಶನ ನೀಡುತ್ತಿದ್ದಾರೆ. ಲೀಗ್ ಹಂತದಲ್ಲಿ ಶ್ರೀಲಂಕಾ ಎದುರು ಸೋತಿರುವ ಪಾಕಿಸ್ತಾನ ಈಗ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಹೊಂದಿದೆ.
ಲೀಗ್‌ನ ಸುಮಾರು ಎರಡು ಪಂದ್ಯಗಳಲ್ಲಿ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟಿರುವ ಅಫ್ರಿದಿ ಬಗ್ಗೆ ಲಂಕಾ ಪಡೆ ಎಚ್ಚರದಿಂದಿರಬೇಕಾಗುತ್ತದೆ.
ಪಾಕಿಸ್ತಾನ: ಮಿಸ್ಬಾ-ಉಲ್-ಹಕ್ (ನಾಯಕ), ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಸೊಹೇಬ್ ಮಕ್ಸೂದ್, ಫವಾದ್ ಆಲಂ, ಅಬ್ದುರ್ ರೆಹಮಾನ್, ಶಾಹಿದ್ ಅಫ್ರಿದಿ, ಉಮರ್ ಅಕ್ಮಲ್, ಉಮರ್ ಗುಲ್, ಮೊಹಮ್ಮದ್ ತಲ್ಹಾ, ಸಯೀದ್ ಅಜ್ಮಲ್, ಬಿಲವಾಲ ಭಟ್ಟಿ, ಜುನೈದ್ ಖಾನ್, ಅನ್ವರ್ ಅಲಿ, ಶರ್ಜೀಲ್ ಖಾನ್.
ಶ್ರೀಲಂಕಾ: ಆ್ಯಂಜೆಲೊ ಮ್ಯಾಥ್ಯೂಸ್ (ನಾಯಕ), ಕುಶಾಲ್ ಪೆರೇರಾ, ಲಹಿರು ತಿರಿಮಾನೆ, ಕುಮಾರ ಸಂಗಕ್ಕಾರ, ಮಹೇಲ ಜಯವರ್ದನೆ, ಆಶನ್ ಪ್ರಿಯಂಜನ್, ಚತುರಂಗ ಡಿಸಿಲ್ವಾ, ತಿಸಾರ ಪೆರೇರಾ, ಸಚಿತ್ರ ಸೇನಾನಾಯಕೆ, ಅಜಂತ ಮೆಂಡಿಸ್, ಸುರಂಗ ಲಕ್ಮಲ್, ಲಸಿತ್ ಮಾಲಿಂಗ, ದಿನೇಶ್ ಚಂಡಿಮಲ್, ಧಮ್ಮಿಕಾ ಪ್ರಸಾದ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement