ಆರ್‌ಸಿಎ ಚುನಾವಣೆ: 25ಕ್ಕೆ ವಿಚಾರಣೆ ಮುಂದೂಡಿಕೆ
ನವದೆಹಲಿ: ಬಿಸಿಸಿಐಗೆ ಮತ್ತೆ ಮರಳಬೇಕೆಂಬ ಉದ್ದೇಶದಿಂದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸ್ಪರ್ಧಿಸಿದ್ದ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾ.25ಕ್ಕೆ ಮುಂದೂಡಿದೆ.
ಮೋದಿ ಮತ್ತೆ ತನ್ನ ವ್ಯಾಪ್ತಿಗೆ ಮರಳದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನವನ್ನು ಬಿಸಿಸಿಐ ನಡೆಸುತ್ತಿದ್ದು, ಬಿಸಿಸಿಐನ ವಕೀಲರು ಕಾನೂನಿನ ಪುಸ್ತಕದಲ್ಲಿರುವ ಎಲ್ಲಾ ಅಂಶವನ್ನು ಬಳಸಿಕೊಂಡು ತೀರ್ಪನ್ನು ಸಾಧ್ಯವಾದಷ್ಟು ತಡ ಮಾಡಲು ಪ್ರಯತ್ನಿಸುತ್ತಿದೆ.
ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ 33 ಮತಗಳಲ್ಲಿ ಮೋದಿ 26 ಮತ ಪಡೆಯುವ ಮೂಲಕ ಮೋದಿ ಗೆಲವು ಸಾಧಿಸಲಿದ್ದಾರೆ ಎಂದು ಬಿಸಿಸಿಐ ಜ.27ರಂದೇ ಒಪ್ಪಿಕೊಂಡಿದ್ದು, ಮೋದಿ ಬಿಸಿಸಿಐಗೆ ಮರಳುವುದನ್ನು ತಡೆಯುವ ಸಲುವಾಗಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಾಧ್ಯವಾದಷ್ಟು ತಡ ಮಾಡುವ ಪ್ರಯತ್ನದಲ್ಲಿದೆ.
ಈ ಮಾ.25ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಅದೇ ದಿನ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯ ವಿಚಾರಣೆಯನ್ನು ನಡೆಸಲಿದೆ.