ಭಾರತ ವನಿತೆಯರ ಮಡಿಲಿಗೆ ಟಿ20 ಸರಣಿ
ಕಾಕ್ಸ್ ಬಜಾರ್: ದುರ್ಬಲ ಬಾಂಗ್ಲಾದೇಶ ವನಿತೆಯರ ವಿರುದ್ಧ ಪ್ರಭುತ್ವ ಮುಂದುವರಿಸಿರುವ ಭಾರತ ವನಿತೆಯರು ಟಿ20 ಸರಣಿಯನ್ನು ಬಾಚಿಕೊಂಡಿದ್ದಾರೆ.
ಮಂಗಳವಾರ ಇಲ್ಲಿನ ಶೇಖ್ ಕಮಲ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ವನಿತೆಯರ ತಂಡ ಬಾಂಗ್ಲಾದೇಶ ವನಿತೆಯರನ್ನು 8 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ್ದಾರೆ. ಈ ಮೂಲಕ ಎರಡು ಟಿ20 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಬಾಂಗ್ಲಾದೇಶ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಪರಿಣಾಮ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ ಕಲೆ ಹಾಕಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 12.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 66 ರನ್ ಗಳಿಸುವ ಮೂಲಕ ಗೆಲವಿನ ದಡ ಸೇರಿತು.
ಭಾರತ ತಂಡ ಈ ಪಂದ್ಯದಲ್ಲಿ ಬೌಲಿಂಗ್ ಜತೆಗೆ ಉತ್ತಮ ಕ್ಷೇತ್ರ ರಕ್ಷಣೆಯನ್ನು ಮಾಡಿತು. ಬಾಂಗ್ಲಾದೇಶದ ನಾಲ್ವರು ಆಟಗಾರ್ತಿಯರನ್ನು ರನೌಟ್ ಮಾಡುವ ಮೂಲಕ ಪೆವಿಲಿಯನ್‌ಗೆ ದಾರಿ ತೋರಿದರು. ಹಾಗಾಗಿ ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಯಿತು.
ಕುಸಿದ ಬಾಂಗ್ಲಾ: ಬೃಹತ್ ಮೊತ್ತವನ್ನು ದಾಖಲಿಸುವ ಉದ್ದೇಶದೊಂದಿಗೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭಿಕ ಆಟಗಾರ್ತಿಯರಾದ ಆಯೆಶಾ ರೆಹಮಾನ್(10), ರಂಜಿತಾ ಇಸ್ಲಾಮ್(5) ರನೌಟ್ ಆಗುವ ಮೂಲಕ ತಂಡಕ್ಕೆ ಆಘಾತ ಎದುರಾಯಿತು. ನಂತರ ಬಂದ ಫರ್ಕ್ವಾನಾ ಹಕ್(18), ನುಜ್ಹತ್ ತಸ್ನಿಯಾ(11) ಹಾಗೂ ಪನ್ನಾ ಘೋಶ್(ಅಜೇಯ 11) ಹೊರತು ಪಡಿಸಿ ಉಳಿದ ಯಾವುದೇ ಆಟಗಾರ್ತಿ ಎರಡಂಕಿ ರನ್ ದಾಖಲಿಸಲಿಲ್ಲ. ಭಾರತದ ಪರ ಜುಲನ್ ಗೋಸ್ವಾಮಿ ಹಾಗೂ ಪೂನಮ್ ಯಾದವ್ ತಲಾ 2 ಹಾಗೂ ಶಿಖಾ ಪಾಂಡೆ 1 ವಿಕೆಟ್ ಪಡೆದರು.
ಸುಲಭ ಜಯ: ಬಾಂಗ್ಲಾ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಗೆಲವಿನ ಹಾದಿ ಕಠಿಣವಾಗಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಮಾಧುರಿ ಮೆಹ್ತಾ(23) ಹಾಗೂ ಶಿಖಾ ಪಾಂಡೆ(16) ಮೊದಲ ವಿಕೆಟ್‌ಗೆ 45 ರನ್ ಪೇರಿಸಿದರು. ಈ ಇಬ್ಬರು ಔಟಾದ ನಂತರ ಬಂದ ಹರ್ಮನ್‌ಪ್ರೀತ್ ಕೌರ್(2) ಹಾಗೂ ಜುಲನ್ ಗೋಸ್ವಾಮಿ(18) ಅಜೇಯರಾಗುಳಿದು ಗೆಲವಿನ ದಡ ಸೇರಿಸಿದರು.
ಭಾರತದ ಪರ ಆಲ್ರೌಂಡ್ ಪ್ರದರ್ಶನ ನೀಡಿದ ಜುಲನ್ ಗೋಸ್ವಾಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 65
(ಫರ್ಕ್ವಾನಾ ಹಕ್ 18, ಪನ್ನಾ ಘೋಶ್ ಅಜೇಯ 11, ಜುಲನ್ ಗೋಸ್ವಾಮಿ 15ಕ್ಕೆ2)
ಭಾರತ 12.3 ಓವರ್‌ಗಳಲ್ಲಿ 2 ವಿಕೆಟ್‌ಗೆ 66
(ಮಾಧುರಿ ಮೆಹ್ತಾ 23, ಜುಲನ್ ಗೋಸ್ವಾಮಿ ಅಜೇಯ 18, ಪನ್ನಾ ಘೋಶ್ 6ಕ್ಕೆ1)