ಛತ್ತೀಸ್‌ಗಡಕ್ಕೆ ಚಾಂಪಿಯನ್ ಪಟ್ಟ
ಕಿರಿಯ ಮಹಿಳೆಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದ ಫೈನಲ್‌ನಲ್ಲಿ ಛತ್ತೀಸ್‌ಗಡ ತಂಡವು...
ಮೈಸೂರು: ಕಿರಿಯ ಮಹಿಳೆಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಬಿ ವಿಭಾಗದ ಫೈನಲ್‌ನಲ್ಲಿ ಛತ್ತೀಸ್‌ಗಡ ತಂಡವು, ಹಾಕಿ ಕೇರಳ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಜಯಭೇರಿ ಬಾರಿಸಿತು.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ಗುರುವಾರ ನಡೆದ ಪಂದ್ಯಾವಳಿಯಲ್ಲಿ ಛತ್ತೀಸ್‌ಗಡ ತಂಡದ ಆಟಗಾರರು ಸಂಘಟಿತ ಹೋರಾಟ ಮತ್ತು ದಿಟ್ಟ ಪ್ರದರ್ಶನದ ಮೂಲಕ ಕೇರಳ ತಂಡವನ್ನು ಬಗ್ಗು ಬಡಿದರು. ದ್ವಿತೀಯ ಸ್ಥಾನ ಪಡೆದ ಕೇರಳ ತಂಡ ರನ್ನರ್ ಆಗಿ ಹೊರಹೊಮ್ಮಿದೆ.
ಛತ್ತೀಸ್‌ಗಡದ ಸಾಧನ ಸೆಂಗರ್ ಅವರು ಪಂದ್ಯದ ಆರನೆ ನಿಮಿಷಯದಲ್ಲಿ ಮೊದಲ ಗೋಲ್ ಬಾರಿಸಿದರು. ಆಗಲೆ ತೀರ ಒತ್ತಡಕ್ಕೆ ಸಿಲುಕಿದಂತೆ ಕಂಡ ಕೇರಳ ತಂಡದ ಆಟಗಾರರು ಚಂಡು ತಮ್ಮ ಅಂಕಣ ಪ್ರವೇಶಿಸದಂತೆ ನೋಡಿಕೊಳ್ಳುವುದನ್ನೆ ತಮ್ಮ ಮೊದಲ ಗುರಿಯಾಗಿಸಿಕೊಂಡರು. ಚಂಡನ್ನು :್ನುತ್ತೀಸ್‌ಗಡ ಆಟಗಾರರಿಂದ ಕಸಿಯಲು ಪ್ರಯತ್ನಿಸಿದರಾದರೂ ಅವರ ಪ್ರಯತ್ನ ಫಲಕೊಡಲಿಲ್ಲ.
ಒಂದು ಪೆನಾಲ್ಟಿ ಕಾರ್ನರ್ ಮತ್ತು ಒಂದು ಪೆನಾಲ್ಟಿ ಸ್ಟ್ರೋಕ್‌ನ ನೆರವು ಪಡೆದುಕೊಂಡ ಛತ್ತೀಸ್‌ಗಡ ಆಟಗಾರರು ಅತ್ಯದ್ಬುತ ಗೋಲ್ ದಾಖಲಿಸಿದರು. ತಂಡದ ಇಶಿಕಾ ಚೌಧರಿ ಪಂದ್ಯದ 44 ಮತ್ತು 62ನೇ ನಿಮಿಷಯದಲ್ಲಿ ಗೋಲ್ ಬಾರಿಸಿ ಸಂಭ್ರಮಿಸಿದರು. ಸಾಧನ ಸೆಂಗರ್, ರೇಣುಯಾದವ್, ಉಪಾಸನ ಸಿಂಗ್ ಮತ್ತು ಪ್ರಿಯಾಂಕ ಪರಿಹಾರ್ ತಲಾ ಒಂದೊಂದು ಗೋಲ್ ಬಾರಿಸಿದರು. ಇದಕ್ಕೆ ಪ್ರತಿಯಾಗಿ ಕೇರಳ ತಂಡದ ಎಂ.ಆರ್. ಸಿಂಧು ಪಂದ್ಯದ 34ನೇ ನಿಮಿಷದಲ್ಲಿ ಒಂದು ಗೋಲ್ ಬಾರಿಸಿ ನಿರೀಕ್ಷೆ ಹುಟ್ಟಿಸಿದರೂ ಪ್ರಯೋಜನವಾಗಲಿಲ್ಲ. ಛತ್ತೀಸ್‌ಗಡ ತಂಡ ಪಂದ್ಯದ ಮೊದಲಾರ್ಧದಲ್ಲಿ 3-1, ದ್ವಿತೀಯಾರ್ಧದಲ್ಲಿ 6-1 ಅಂತರ ಕಾಯ್ದುಕೊಂಡಿತು.
ಪೆನಾಲ್ಟಿ ಕಾರ್ನರ್‌ನ ಲಾಭ ಪಡೆದ ಪ್ರಿಯಾಂಕ ಪರಿಹಾರ್ ನೇರವಾಗಿ ಅದ್ವಿತೀಯ ಗೋಲ್ ಬಾರಿಸಿದರೆ, ಪೆನಾಲ್ಟಿ ಸ್ಟ್ರೋಕ್‌ನ ಲಾಭ ಪಡೆದ ಉಪಾಸನ ಸಿಂಗ್ ಸಹ ಅದೆ ಮಾದರಿಯಲ್ಲಿ ಚಂಡನ್ನು ಗೋಲ್‌ನ ಅಂಕಣ ಪ್ರವೇಶಿಸುವಂತೆ ಮಾಡಿದರು. ಇದಕ್ಕೂ ಮುನ್ನ ಐದನೆ ಗೋಲ್ ವೇಳೆ ತಂಡದ ಸಹ ಆಟಗಾರರು ತನ್ನತ್ತ ತಳ್ಳಿದ ಚಂಡನ್ನು ಇಶಾಂಕ ಚೌಧರಿ ಸುಲಭವಾಗಿ ಗೋಲ್ ಅಂಕಣಕ್ಕೆ ತಳ್ಳಿದರು. ಬಿ ವಿಭಾಗದ ಫೈನಲ್‌ನಲ್ಲಿ ಜಯಗಳಿಸಿದ ಛತ್ತೀಸ್‌ಗಡ ಮತ್ತು ರನ್ನರ್ ಆದ ಕೇರಳ ತಂಡಗಳು ಮುಂದಿನ ಬಾರಿಯ ಪಂದ್ಯಾವಳಿಗೆ ಎ ವಿಭಾಗದಲ್ಲಿ ಕಾಣಿಸಿಕೊಳ್ಳಲಿವೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಒಡಿಶಾ ತಂಡವು, ಮಣಿಪುರವನ್ನು 2-0 ಅಂತರದಿಂದ ಮಣಿಸಿ ಮೂರನೆ ಸ್ಥಾನ ಪಡೆಯಿತು. ಒಡಿಶಾ ತಂಡದ ನಾಯಕಿ ರಿಂಕಿ ಕುಜೂರ್ ಮತ್ತು ಲಕ್ಷ್ಮಿ ಎಕ್ಕ ತಲಾ ಒಂದೊಂದು ಗೋಲ್ ಬಾರಿಸಿದರು.
ಕೇರಳ ಮಣಿಸಿದ ಛತ್ತೀಸ್‌ಗಡ 6-1
ಛತ್ತೀಸ್‌ಗಡ ಗೋಲ್ ಸ್ಕೋರ್
ಸಾಧನ ಸೆಂಗರ್ 6ನಿ.
ರೇಣು ಯಾದವ್ 13ನಿ.
ಉಪಾಸನ ಸಿಂಗ್ 27ನಿ.
ಇಶಿಕ ಚೌಧರಿ 44, 62ನಿ.
ಪ್ರಿಯಾಂಕ ಪರಿಹಾರ್ 63ನಿ.
ಕೇರಳ ಗೋಲ್ ಸ್ಕೋರ್
ಎಂ.ಆರ್. ಸಿಂಧು 34ನಿ.
ಮಣಿಪುರ ಮಣಿಸಿದ ಒಡಿಶಾ 2-0
ಒಡಿಶಾ ಗೋಲ್ ಸ್ಕೋರ್
ರಿಂಕಿ ಕುಜೂರ್ 2ನಿ.
ಲಕ್ಷ್ಮಿ ಎಕ್ಕ 28ನಿ.
- ಡಿ.ಎನ್. ಮಹೇಂದ್ರ