ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮೀಸ್‌ಗೆ ಸಾನಿಯಾ ಜೋಡಿ

Vishwanath S
Updated On : 14 Mar 2014, 1:03 am

ಇಂಡಿಯಾನ ವೆಲ್ಸ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿಯು ತಮ್ಮ ಗೆಲವಿನ ಯಾನ ಮುಂದುವರಿಸಿದ್ದು, ಇಂಡಿಯಾನ ವೆಲ್ಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಕಾರಾ ಬ್ಲ್ಯಾಕ್ ಜೋಡಿ ತಮ್ಮ ಎದುರಾಳಿ ಎರಡನೇ ಶ್ರೇಯಾಕಿತ ಜೋಡಿಯಾದ ರಷ್ಯಾದ ಎಕ್ಯಾಥರಿನ್ ಮಕರೋವಾ ಹಾಗೂ ಎಲೆನಾ ವೆಸ್ನಿನಾ ಜೋಡಿಯನ್ನು  6-4, 6-1 ಸೆಟ್‌ಗಳ ಅಂತರದಲ್ಲಿ ಮಣಿಸಿತು.
ಪಂದ್ಯದ ಆರಂಭಿದಿಂದಲೂ ಎದುರಾಳಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭಾರತ ಹಾಗೂ ಜಿಂಬಾಬ್ವೆ ಜೋಡಿ ಮೊದಲ ಸೆಟ್‌ನಲ್ಲಿ 6-4 ಅಂತರದಿಂದ ಮುನ್ನಡೆ ಪಡೆಯಿತು. ನಂತರ ಎರಡನೇ ಸೆಟ್‌ನಲ್ಲೂ ನಿಯಂತ್ರಣ ಮುಂದುವರಿಸಿದ ಸಾನಿಯಾ ಜೋಡಿ 6-1 ಅಂತರದಿಂದ ಮೇಲುಗೈ ಸಾಧಿಸಿದರು. ಈ ಜೋಡಿ ಉಪಾಂತ್ಯದ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಜೆಕ್ ಗಣರಾಜ್ಯದ ಲೂಸಿಯಾ ಹರ್ಡೆಕಾ ಮತ್ತು ಚೀನಾದ ಜೀ ಜೆಂಗ್ ಜೋಡಿಯನ್ನು ಎದುರಿಸಲಿದೆ.
ಪೇಸ್ ಜೋಡಿಗೆ ನಿರಾಸೆ: ಇನ್ನು ಭಾರತದ ಹಿರಿಯ ತಾರೆ ಲಿಯಾಂಡರ್ ಪೇಸ್ ಹಾಗೂ ರಾಡೆಕ್ ಸ್ಟೆಪಾನೆಕ್ ಜೋಡಿಯು ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಎಂಟರ ಘಟ್ಟದಲ್ಲಿ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಟಾನಿಸ್ಲಾಸ್ ವಾವ್ರಿಂಕಾ ಜೋಡಿಯನ್ನು ಎದುರಿಸಿದ ಪೇಸ್ ಜೋಡಿ ಉತ್ತಮ ಹೋರಾಟ ನೀಡಿತಾದರೂ, ಪಂದ್ಯದಲ್ಲಿ ಗೆಲವು ದಾಖಲಿಸಲು ಸಾಧ್ಯವಾಗಲಿಲ್ಲ. ಒಂದು ಗಂಟೆ 19 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉಭಯ ಜೋಡಿಗಳು ಪ್ರಬಲ ಹೋರಾಟ ನಡೆಸಿದವು ಹಾಗಾಗಿ ಪಂದ್ಯದ ಫಲಿತಾಂಶ ಪಡೆಯಲು ಸೂಪರ್ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಮೊದಲ ಸೆಟ್‌ನಲ್ಲಿ 3-6 ಅಂತರದ ಹಿನ್ನಡೆ ಪಡೆದ ಪೇಸ್ ಹಾಗೂ ಸ್ಟೆಪಾನೆಕ್, ಎರಡನೇ ಸೆಟ್‌ನಲ್ಲಿ ಪ್ರಬಲ ಹೋರಾಟ ನಡೆಸಿದರು. ಪರಿಣಾಮ 7-6(6) ಅಂಕ ಪಡೆದು ಸೆಟ್‌ಗಳ ಅಂತರವನ್ನು ಸಮಬಲಗೊಳಿಸಿದರು. ಇನ್ನು ಮೂರನೇ ಸೆಟ್‌ನಲ್ಲಿ ಸ್ವಿಸ್ ಜೋಡಿಯು ತಮ್ಮ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಹಾಗಾಗಿ ಅಂತಿಮ ಸೆಟ್‌ನಲ್ಲಿ 10-4 ಅಂತರದಲ್ಲಿ ಮುನ್ನಡೆ ಪಡೆದು, ಗೆಲವಿನ ಕೇಕೆ ಹಾಕಿತು. ಫೆಡರರ್ ಹಾಗೂ ವಾವ್ರಿಂಕಾ ಜೋಡಿ ಉಪಾಂತ್ಯದ ಸುತ್ತಿನಲ್ಲಿ ಅಲೆಕ್ಸಾಂಡರ್ ಪೇಯಾ ಮತ್ತು ಬ್ರೂನೊ ಸೋರಸ್ ಜೋಡಿಯನ್ನು ಎದುರಿಸಲಿದೆ.
ಕ್ವಾರ್ಟರ್‌ಗೆ ಜೋಕೊವಿಚ್: ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನೊವಾಕ್ ಜೊಕೊವಿಚ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಜೊಕೊವಿಚ್ ಜತೆಗೆ ಹಿರಿಯ ಆಟಗಾರ ರೋಜರ್ ಫೆಡರರ್ ಸಹ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಜೊಕೊ ತಮ್ಮ ಎದುರಾಳಿ ಕ್ರೊವೇಶಿಯಾದ ಮಾರ್ಟೀನ್ ಸಿಲಿಕ್ ವಿರುದ್ಧ 1-6, 6-2, 6-3 ಸೆಟ್‌ಗಳ ಅಂತರದ ಗೆಲವು ದಾಖಲಿಸಿದರೆ, ಫೆಡರರ್ ತಮ್ಮ ಪ್ರತಿಸ್ಪರ್ಧಿ ಜರ್ಮನಿಯ ಟೊಮಿ ಹಸ್ ವಿರುದ್ಧ 6-4, 6-4 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಮರ್ರೆ, ವಾವ್ರಿಂಕಾ ನಿರಾಸೆ: ಇನ್ನು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಸ್ಟಾನಿಸ್ಲಾಸ್ ವಾವ್ರಿಂಕಾ ತಮ್ಮ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ವಾವ್ರಿಂಕಾ 7-6(1), 4-6, 6-1 ಸೆಟ್‌ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್‌ಸನ್‌ಗೆ ಮಣಿದರು. ಆ್ಯಂಡರ್‌ಸನ್ ತಮ್ಮ ಮುಂದಿನ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾನೆ. ಇನ್ನು ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಸಹ ತಮ್ಮ ಎದುರಾಳಿ ಕೆನಡಾದ ಮಿಲೋಸ್ ರೌನಿಕ್ ವಿರುದ್ಧ 6-4, 5-7, 3-6 ಸೆಟ್‌ಗಳ ಅಂತರದಲ್ಲಿ ಮಣಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement