ಕ್ರಿಕೆಟ್ನಲ್ಲಿ ನಿಮಗೆ ರೈಟ್ ಹ್ಯಾಂಡ್ ಆಟಗಾರರು ಮತ್ತು ಲೆಫ್ಟ್ ಹ್ಯಾಂಡ್ ಆಟಗಾರರು ಗೊತ್ತು. ಆದರೆ ಸೆಕೆಂಡ್ ಹ್ಯಾಂಡ್ ಆಟಗಾರರ ಬಗ್ಗೆ ಗೊತ್ತೇ? ರಾಷ್ಟ್ರವೊಂದರ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸುವುದು ಸುಲಭ ಸಾಧ್ಯವಲ್ಲ. ಹಾಗಿದ್ದಾಗ, ವೃತ್ತಿ ಜೀವನದಲ್ಲಿ ಎರಡು ದೇಶಗಳನ್ನು ಪ್ರತಿನಿಧಿಸುವುದು ಕಲ್ಪಿಸಿಕೊಳ್ಳುವುದು ಹೇಗೆ ತಾನೆ ಸಾಧ್ಯ? ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಣುಕಿ ನೋಡಿದಾಗ ಇದು ಸಾಧ್ಯ ಎಂಬುದು ಗೊತ್ತಾಗುತ್ತದೆ. ಇಲ್ಲಿ ಎರಡು ರಾಷ್ಟ್ರಗಳನ್ನು ಪ್ರತಿನಿಧಿಸಿರುವ ಅನೇಕ ಆಟಗಾರರು ಕಾಣಸಿಗುತ್ತಾರೆ. ಕ್ರಿಕೆಟ್ ಆರಂಭಿಕ ದಿನಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಹಲವು ಆಟಗಾರರು ಉಭಯ ತಂಡಗಳಿಗೂ ಆಡಿದ ಉದಾಹರಣೆಗಳಿವೆ.
ಇತ್ತೀಚಿನ ದಿನಗಳಲ್ಲಿ ಐಪಿಎಲ್ ಮಾದರಿಯ ಕ್ಲಬ್ ಹಾಗೂ ಫ್ರಾಂಚೈಸಿ ಮಾದರಿ ಕ್ರಿಕೆಟ್ನಲ್ಲಿ ಈ ವರ್ಷ ಒಂದು ತಂಡದ ಪರ ಆಡಿದ ಆಟಗಾರ ಮುಂದಿನ ವರ್ಷ ಬೇರೆ ತಂಡದಲ್ಲಿರುತ್ತಾನೆ. ಇನ್ನು ದೇಶಿಯ ಪಂದ್ಯಾವಳಿಯಾದ ರಣಜಿಯಲ್ಲೂ ಈ ರೀತಿಯ ಬೆಳವಣಿಗೆಯನ್ನು ನೋಡಬಹುದು. ಒಂದು ತಂಡದ ಪರ ಆಡಿದ ಆಟಗಾರ ಆ ತಂಡದಿಂದ ಹೊರ ಬಿದ್ದರೆ, ಅಥವಾ ಇತರೆ ಕಾರಣಗಳಿಂದ ಬೇರೆ ತಂಡದ ಪರ ಆಡುವುದನ್ನು ನಾವು ನೋಡಿದ್ದೇವೆ.
1920ರ ದಶಕದ ಆಟಗಾರರು
ಪ್ರಥಮ ಬಾರಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ನಡೆದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಆಡಿದ ಬಿಲ್ಲಿ ಮಿಡ್ವಿಂಟರ್ ಉಭಯ ತಂಡಗಳ ಪರವಾಗಿ ಆಡಿದ್ದಾರೆ. ಅಲ್ಲಿಂದ ಆರಂಭವಾದ ಈ ಪರಂಪರೆಯಲ್ಲಿ ಸ್ಯಾಮಿ ವುಡ್ಸ್, ಫ್ರ್ಯಾಂಕ್ ಹ್ಯಾಮ್, ಫ್ರ್ಯಾಂಕ್ ಮಿಚೆಲ್ ಹೆಸರು ಕಂಡುಬರುತ್ತದೆ.
ನಂತರ ಭಾರತದ ಇಫ್ತೀಕರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ತಂಡದ ಪರ ಆ್ಯಶಸ್ ಸರಣಿಯಾಡಿ ನಂತರ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಾಲಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಪಿತಾಮಹ ಎಂದೇ ಕರೆಯಲ್ಪಡುವ ಅಬ್ದುಲ್ ಹಫೀಜ್ ಕಾರ್ದರ್, ವೆಸ್ಟ್ ಇಂಡೀಸ್ನ ಸ್ಯಾಮಿ ಗ್ಯುಲೆನ್ ಅವರು ಎರಡು ದೇಶದ ಪರ ಆಡಿದ ಆಟಗಾರರಾಗಿದ್ದಾರೆ.
ಆಧುನಿಕ ಕ್ರಿಕೆಟ್ನ ಆಟಗಾರರು
1980ರ ದಶಕದ ನಂತರ ಆಧುನಿಕ ಕ್ರಿಕೆಟ್ ಯುಗದಲ್ಲೂ ಎರಡು ದೇಶಕ್ಕಾಗಿ ಆಡಿದ ಆಟಗಾರರ ಪಟ್ಟಿ ಸಹ ಒಂದೆರಡು ಹೆಸರಿಗೆ ಮುಗಿಯುವುದಿಲ್ಲ. 80ರ ದಶಕದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಸ್ಟ್ರೇಲಿಯಾ ತಂಡದ ಪರ ವೃತ್ತಿ ಜೀವನ ಆರಂಭಿಸಿದ ಕೆಪ್ಲರ್ ವೆಸ್ಸಲ್ ನಂತರ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡರು. ಆನಂತರ ಸಿಬಿ ಲ್ಯಾಂಬರ್ಟ್, ಎಸಿ ಕಮಿನ್ಸ್, ಡಿಆರ್ ಬ್ರೌನ್, ಇಸಿ ಜೊಯ್ಸ್, ಐಯಾನ್ ಮಾರ್ಗನ್, ಡಬ್ಲ್ಯೂಬಿ ರ್ಯಾಂಕಿನ್, ಲ್ಯೂಕ್ ರೊಂಚಿ ಎರಡು ದೇಶಗಳಿಗೆ ಆಡಿದ ಆಟಗಾರರಾಗಿದ್ದಾರೆ.
ಬಿಲ್ಲಿ ಮಿಡ್ವಿಂಟರ್
ಇಂಗ್ಲೆಂಡ್ 1877ರಲ್ಲಿ ಜನಿಸಿದ ನಡೆದ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆನಂತರ ಆಸ್ಟ್ರೇಲಿಯಾ ತಂಡದ ಪರ ಆಡಿದ್ದರು. ಈತ ಇಂಗ್ಲೆಂಡ್ ಪರ 4 ಹಾಗೂ ಆಸ್ಟ್ರೇಲಿಯಾ ಪರ 8 ಟೆಸ್ಟ್ ಪಂದ್ಯವನ್ನಾಡಿದ್ದಾರೆ.
ಸ್ಯಾಮಿ ವುಡ್ಸ್
1888ರಲ್ಲಿ ಆಸ್ಟ್ರೇಲಿಯಾ ತಂಡದ ಪರ ಪದಾರ್ಪಣೆ ಮಾಡಿದ ಸ್ಯಾಮಿ, ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದರು. ನಂತರ 1896ರಲ್ಲಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನಾಡಿದ್ದಾರೆ. ಇವರು ಒಟ್ಟು 6 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ಫ್ರ್ಯಾಂಕ್ ಮಿಚೆಲ್
1899ರಲ್ಲಿ ಇಂಗ್ಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಿದ ಮಿಚೆಲ್, ಇಂಗ್ಲೆಂಡ್ ತಂಡದ ಪರ 2 ಟೆಸ್ಟ್ ಆಡಿದರು. ನಂತರ 1912ರಲ್ಲಿ ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯವನ್ನಾಡಿದರು.
ಕ್ಲೇಟನ್ ಲ್ಯಾಂಬರ್ಟ್
1990-98ರವರೆಗೂ ವೆಸ್ಟ್ ಇಂಡೀಸ್ ತಂಡದ ಪರ 11 ಏಕದಿನ ಪಂದ್ಯಗಳನ್ನಾಡಿದ ಲ್ಯಾಂಬರ್ಟ್, ನಂತರ 2004ರಲ್ಲಿ ಯುಎಸ್ಎ ತಂಡದ ಪರ ಏಕೈಕ ಪಂದ್ಯವನ್ನಾಡಿದರು.
ಎಸಿ ಕಮಿನ್ಸ್
1991ರಿಂದ95ರವರೆಗೆ ವೆಸ್ಟ್ ಇಂಡೀಸ್ ತಂಡದ ಪರ 63 ಟೆಸ್ಟ್ ಪಂದ್ಯಗಳನ್ನಾಡಿದ್ದ ಕಮಿನ್ಸ್, 2007ರಲ್ಲಿ ಕೆನಡಾ ತಂಡದ ಪರ 13 ಏಕದಿನ ಪಂದ್ಯಗಳನಾಡಿದ್ದಾರೆ.
ಡೌಗಿ ಬ್ರೌನ್
1997-98ರಲ್ಲಿ ಇಂಗ್ಲೆಂಡ್ ತಂಡದ ಪರ 9 ಪಂದ್ಯಗಳನ್ನಾಡಿರುವ ಬ್ರೌನ್, 2006-07ರಲ್ಲಿ ಸ್ಕಾಟ್ಲೆಂಡ್ ತಂಡದ ಪರ 16 ಪಂದ್ಯಗಳನ್ನಾಡಿದ್ದಾರೆ.
ಎಡ್ ಜೊಯ್ಸ್
2006-07ರಲ್ಲಿ ಇಂಗ್ಲೆಂಡ್ ತಂಡದ ಪರ 17 ಪಂದ್ಯಗಳನ್ನಾಡಿದ ಜೊಯ್ಸ್, 2011-14ರವರೆಗೆ ಐರ್ಲೆಂಡ್ ತಂಡದ ಪರ 23 ಪಂದ್ಯಗಳನ್ನಾಡಿದ್ದಾರೆ.
ವಿಲಿಯಮ್ ರ್ಯಾಂಕಿನ್
2007ರಿಂದ 12ರವರೆಗೂ ಐರ್ಲೆಂಡ್ ತಂಡದ ಪರ 37 ಪಂದ್ಯಗಳನ್ನಾಡಿದ್ದು, 2013ರಿಂದ ಇಂಗ್ಲೆಂಡ್ ತಂಡದ ಆಟಗಾರನಾಗಿ ಆಡುತ್ತಿದ್ದಾರೆ.
ಲ್ಯೂಕ್ ರೊಂಚಿ
2008ರಲ್ಲಿ ಆಸ್ಟ್ರೇಲಿಯಾ ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ಆಯ್ಕೆಯಾದ ರೊಂಚಿ 4 ಪಂದ್ಯಗಳನ್ನಾಡಿದರು. ನಂತರ 2013ರಿಂದ ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದು, ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಡರ್ಕ್ ನ್ಯಾನಿಸ್
2009ರಲ್ಲಿ ಸ್ಕಾಟ್ಲೆಂಡ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನ್ಯಾನಿಸ್ 2 ಪಂದ್ಯಗಳನ್ನಾಡಿದರು, ಆನಂತರ ಆಸ್ಟ್ರೇಲಿಯಾ ತಂಡದಲ್ಲಿ ಆಡುವ ಅವಕಾಶ ಪಡೆದ ನ್ಯಾನಿಸ್ ವೇಗದ ಬೌಲರ್ ಆಗಿ ಆಸೀಸ್ಗೆ ಉತ್ತಮ ಕಾಣಿಕೆ ನೀಡಿದ್ದಾರೆ.
ಅಬ್ದುಲ್ ಹಫೀಜ್ ಕಾರ್ದರ್
ಪಾಕಿಸ್ತಾನ ಕ್ರಿಕೆಟ್ನ ಪಿತಾಮಹ ಎಂದೇ ಖ್ಯಾತಿ ಪಡೆದಿರುವ ಅಬ್ದುಲ್ ಹಫೀಜ್, ಪಾಕಿಸ್ತಾನ ಹಾಗೂ ಭಾರತದ ಪರ ಆಡಿದ ಆಟಗಾರನಾಗಿದ್ದಾರೆ. ಸ್ವತಂತ್ರ ಪೂರ್ವ ಭಾರತದ ಪರ ಆಡಿದ ಹಫೀಜ್, ಸ್ವತಂತ್ರದ ನಂತರ ಪಾಕಿಸ್ತಾನಕ್ಕೆ ತೆರಳಿದರು. ಅಲ್ಲದೆ ಪಾಕಿಸ್ತಾನ ತಂಡದ ಪ್ರಥಮ ನಾಯಕರಾದರು.
ಇಫ್ತೀಕರ್ ಅಲಿ ಖಾನ್ ಪಟೌಡಿ
ದೆಹಲಿಯ ಪಟೌಡಿ ಕುಟುಂಬದಲ್ಲಿ ಜನಿಸಿದ ಇಫ್ತೀಕರ್, 1932-33ರಲ್ಲಿ ಇಂಗ್ಲೆಂಡ್ ತಂಡದ ಪರ ಆ್ಯಶಸ್ ಸರಣಿಯಲ್ಲಿ ಭಾಗವಹಿಸಿದ್ದರು. ಆನಂತರ 1946ರಲ್ಲಿ ಇವರು ಭಾರತ ತಂಡದ ಪರ ಆಡಿದರು. ನಂತರ ಈತನ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಸಹ ಭಾರತ ತಂಡಕ್ಕಾಗಿ ಆಡಿ ತಂಡವನ್ನು ಮುನ್ನಡೆಸಿದರು. ಅಲ್ಲದೆ ಭಾರತ ತಂಡವನ್ನು ಮುನ್ನಡೆಸಿದ ಏಕೈಕ ಅಪ್ಪ ಮಗನ ಜೋಡಿ ಇವರದ್ದಾಗಿದೆ.
ಫ್ರ್ಯಾಂಕ್ ಹ್ಯಾಮ್
ಇಂಗ್ಲೆಂಡ್ ತಂಡದ ಪರ 1889ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವನ್ನಾಡಿದ್ದ ಫ್ರ್ಯಾಂಕ್, ನಂತರ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದು 1896ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕಡೆಯ ಟೆಸ್ಟ್ ಪಂದ್ಯವನ್ನಾಡಿದರು.
ಕೆಪ್ಲರ್ ವೆಸ್ಸೆಲ್ಸ್
1982ರಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಿದ ಕೆಪ್ಲರ್ ವೆಸೆಲ್ಸ್ ಆಸ್ಟ್ರೇಲಿಯಾದ ಅತ್ಯುತ್ತಮ ಆರಂಭಿಕ ಆಟಗಾರನಾಗಿದ್ದರು. ನಂತರ 1991ರಲ್ಲಿ ದಕ್ಷಿಣ ಆಫ್ರಿಕಾ ತಂಡ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದಾಗ ಕೆಪ್ಲರ್ ಹರಿಣಗಳ ಪಡೆಗೆ ನಾಯಕರಾದರು. ಅಲ್ಲದೆ ಎರಡು ದೇಶದ ಪರ ಟೆಸ್ಟ್ ಹಾಗೂ ಸೀಮಿತ ಓವರ್ ಕ್ರಿಕೆಟ್ ಆಡಿದ ಏಕೈಕ ಕ್ರಿಕೆಟರ್ ಆಗಿದ್ದಾರೆ. ಆಸೀಸ್ ಪರ 54 ಹಾಗೂ ದಕ್ಷಿಣ ಆಫ್ರಿಕಾ ಪರ 55 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಸ್ಯಾಮಿ ಗ್ಯುಲೆನ್
ವೆಸ್ಟ್ ಇಂಡೀಸ್ನ ಕ್ರಿಕೆಟ್ ಕುಟುಂಬದ ಹಿನ್ನೆಲೆಯಲ್ಲಿ ಜನಿಸಿದ ಸ್ಯಾಮಿ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡದ ಪರ ಆಡಿದ್ದಾರೆ. 1951ರಲ್ಲಿ ವೆಸ್ಟ್ ಇಂಡೀಸ್ ಪರ ಪದಾರ್ಪಣೆ ಮಾಡಿದ ಸ್ಯಾಮಿ, 1956ರಲ್ಲಿ ನ್ಯೂಜಿಲೆಂಡ್ ತಂಡದ ಪರ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕಡೆಯ ಪಂದ್ಯವನ್ನಾಡಿದರು.
ಐಯಾನ್ ಮಾರ್ಗನ್
2006ರಲ್ಲಿ ಐರ್ಲೆಂಡ್ ತಂಡದ ಪರ ವೃತ್ತಿ ಜೀವನ ಆರಂಭಿಸಿದ ಮಾರ್ಗನ್ 2009ರ ವರೆಗೆ 23 ಪಂದ್ಯಗಳನ್ನಾಡಿದ್ದರು. ಆನಂತರ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾಗಿರುವ ಮಾರ್ಗನ್ ಇದುವರೆಗೂ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದಾರೆ.
- ಸೋಮಶೇಖರ ಪಿ. ಭದ್ರಾವತಿ