ಮಂದಸ್ಮಿತ್
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯ ನಿರ್ಧಾರಗಳು ಯಾವತ್ತಿದ್ದರೂ ಖಡಕ್. ತನ್ನ ಲೆಕ್ಕಾಚಾರಗಳಿಗಾಗಿ ಅದು ಸ್ಟಾರ್...
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯ ನಿರ್ಧಾರಗಳು ಯಾವತ್ತಿದ್ದರೂ ಖಡಕ್. ತನ್ನ ಲೆಕ್ಕಾಚಾರಗಳಿಗಾಗಿ ಅದು ಸ್ಟಾರ್ ಆಟಗಾರನನ್ನೂ ಬಲಿ ತೆಗೆದುಕೊಳ್ಳುತ್ತದೆ. ಅದಕ್ಕೆ ಉತ್ತಮ ಉದಾಹರಣೆಗಳೆಂದರೆ ಹ್ಯಾನ್ಸಿ ಕ್ರೋನಿಯೇ, ಲ್ಯಾನ್ಸ್ ಕ್ಲೂಸನರ್.
1999ರ ವಿಶ್ವಕಪ್ನಲ್ಲಿ ಮಾಡಿದ ಸಣ್ಣ ಎಡವಟ್ಟಿಗೆ ಲ್ಯಾನ್ಸ್ ಕ್ಲೂಸನರ್ ಅವರನ್ನು ನಿರಂತರ ನಿರ್ಲಕ್ಷಿಸಿದ ಅಲ್ಲಿನ ಮಂಡಳಿ, ಮುಂದಿನ ವರ್ಷ ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಲುಕಿಕೊಂಡ ವಿಶ್ವ ಕಂಡ ಚಾಣಾಕ್ಷ ನಾಯಕ ಹ್ಯಾನ್ಸಿ ಕ್ರೋನಿಯೆ ನೆನಪನ್ನೇ ತಂಡದಿಂದ ಕಿತ್ತು ಹಾಕಬೇಕೆಂಬ ಸಂಕಲ್ಪ ತೊಟ್ಟಿತ್ತು. 2000ದ ದಿನಗಳೇ ಹಾಗಿದ್ದವು. ಹ್ಯಾನ್ಸಿ ಕ್ರೋನಿಯೇ ತಪ್ಪಿಗಾಗಿ ಆತನಿಗೇನೋ ಜೀವನಪರ್ಯಂತ ನಿಷೇಧ ಹೇರಿಯಾಗಿತ್ತು. ಆತ ತಂಡವನ್ನು ತೊರೆದರೂ, ಆತನ ಪ್ರಭಾವ ಮತ್ತು ಪ್ರಭಾವಳಿ ಆಫ್ರಿಕಾ ತಂಡವನ್ನು ಬಿಟ್ಟಿರಲಿಲ್ಲ. ಆತನಿಂದ ತಂಡದ ನಾಯಕತ್ವವನ್ನು ವಹಿಸಿಕೊಂಡ ಶಾನ್ ಪೊಲಾಕ್ನಿಂದ ಹಿಡಿದು ಜಾಂಟಿ ರೋಡ್ಸ್, ಗ್ಯಾರಿ ಕರ್ಸ್ಟನ್, ಅಲನ್ ಡೋನಾಲ್ಡ್, ಜಾಕ್ ಕಾಲಿಸ್, ಹರ್ಷಲ್ ಗಿಬ್ಸ್, ಬೌಶರ್ವರೆಗೆ ಎಲ್ಲರೂ ಹ್ಯಾನ್ಸಿ ಕಟ್ಟಾ ಅಭಿಮಾನಿಗಳು.
ಹೀಗಾಗಿ ಈ ದುರಂತವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಅವರಿರಲಿಲ್ಲ. ಹೀಗಾಗಿ ಸಮರ್ಥ ತಂಡವಿದ್ದೂ ಹಿನ್ನಡೆ ಅನುಭವಿಸಬೇಕಾಯ್ತು. ಶಾನ್ ಪೊಲಾಕ್ನಿಂದ ನಾಯಕತ್ವ ಕಿತ್ತು ಬೇರೆ ಯಾರ ತಲೆ ಮೇಲೆ ಹಾಕಿದರೂ ಪರಿಣಾಮ ಶೂನ್ಯ ಎಂಬುದನ್ನು ಮಂಡಳಿ ಅದಾಗಲೇ ಅರ್ಥೈಸಿಕೊಂಡಾಗಿತ್ತು. ಆಗ ತಂಡಕ್ಕೆ ಅಗತ್ಯವಿದ್ದುದು ಹ್ಯಾನ್ಸಿ ಪ್ರಭಾವಳಿಯಿಂದ ಹೊರಗಿರುವ ಮತ್ತು ಆ ಪ್ರಭಾವಳಿಯಿಂದ ತಂಡವನ್ನು ಹೊರತರಬಲ್ಲ ಒಬ್ಬ ಸಮರ್ಥ ನಾಯಕ. ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. ದಿ ಗ್ರೇಟ್ ಗ್ರೇಮ್ ಸ್ಮಿತ್.
ಅದೃಷ್ಟ...
2003ರ ವಿಶ್ವಕಪ್ನಲ್ಲಿ ಆತಿಥೇಯ ತಂಡವಾಗಿದ್ದ ದಕ್ಷಿಣ ಆಫ್ರಿಕಾ ಸೂಪರ್ ಸಿಕ್ಸ್ ಹಂತಕ್ಕೂ ತಲುಪದೇ ಇದ್ದುದನ್ನು ಕ್ರಿಕೆಟ್ ಸೌತ್ ಆಫ್ರಿಕಾ ತಂಬಾ ಗಂಭೀರವಾಗಿ ತೆಗೆದುಕೊಂಡಿತು. ಭವಿಷ್ಯದ ಬಗ್ಗೆ ಆಲೋಚಿಸಿದ ಮಂಡಳಿ, ತಂಡ ಸತತ ಎರಡು ವರ್ಷ ಸೋತರೂ, ಅಡ್ಡಿಯಿಲ್ಲ. ಭವಿಷ್ಯದಲ್ಲಿ ಉತ್ತಮ ಫಲಿತಾಂಶವನ್ನು ತರಬಲ್ಲ ತಂಡವನ್ನು ಕಟ್ಟಬೇಕು ಎಂಬ ನಿಲುವಿಗೆ ಬದ್ಧವಾಯಿತು. ಆಗ ಕಣ್ಣಿಗೆ ಬಿದ್ದಿದ್ದು ವರ್ಷದ ಹಿಂದಷ್ಟೇ ತಂಡಕ್ಕೆ ಪದಾರ್ಪಣೆ ಮಾಡಿದ್ದ ಗ್ರೇಮ್ ಸ್ಮಿತ್ ಎಂಬ ಬಿಸಿ ರಕ್ತದ ಯುವಕ. ಡ್ರೆಸ್ಸಿಂಗ್ ರೂಂನಲ್ಲಿರಬಹುದು, ಮೈದಾನದಲ್ಲೇ ಇರಬಹುದು ಉಕ್ಕಿನ ಮನುಷ್ಯನಾಗಿದ್ದ ಆತನ ಸಾಮರ್ಥ್ಯವನ್ನು ಅಧಿಕಾರಿಗಳು ಬಹಳ ಬೇಗನೆ ಮನಗಂಡರು. ಆತ ನಿರ್ಭೀತ, ಮುಲಾಜಿಲ್ಲದ ಮನುಷ್ಯ. ಆತ ಸಮರ್ಥ ಬ್ಯಾಟ್ಸ್ಮನ್ ಎಂಬುದಕ್ಕೆ ಯಾವುದೇ ಅನುಮಾನವಿರಲಿಲ್ಲ. ಆದರೂ ಕೆ ವಲ 8 ಟೆಸ್ಟ್, 22 ಏಕದಿನ ಪಂದ್ಯಗಳನ್ನಷ್ಟೇ ಆಡಿರುವ ಕಿರಿಯನಿಗೆ ಹಿರಿಯರನ್ನೊಳಗೊಂಡ ತಂಡದ ಜವಾಬ್ದಾರಿ ಕೊಡುವುದೆಂದರೆ ತಮಾಷೆಯ ವಿಷಯವಾಗಿರಲಿಲ್ಲ.
ಪ್ರಪಂಚವೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದರೂ ತನ್ನ ನಿರ್ಧಾರಕ್ಕೆ ಅಂಟಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 22ರ ಹರೆಯದ ಸ್ಮಿತ್ಗೆ ಪಟ್ಟ ಕಟ್ಟಿಯೇ ಬಿಟ್ಟಿತು. ಅಂದು ಎಲ್ಲರೂ ನಕ್ಕರು. ಇದು ಹುಚ್ಚು ಬದಲಾವಣೆ ಎಂದು ಟೀಕಿಸಿದರು. ಇದಾಗಿ ಬರೋಬ್ಬರಿ 11 ವರ್ಷ ಕಳೆದಿದೆ. ಅಂದು ಟೀಕಿಸಿದವರೆಲ್ಲರಿಗೂ ಅದು ಮರೆತೇ ಹೋಗಿದೆ. ದಕ್ಷಿಣಾ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರಕ್ಕೆ ತಾನು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದ್ದಾರೆ ಗ್ರೇಮ್ ಸ್ಮಿತ್. ಆತನ ದಾಖಲೆಯೇ ಇದನ್ನು ಸಮರ್ಥಿಸುತ್ತದೆ.
ನೆನಪಿಡಿ ಸ್ಮಿತ್ ನಾಯಕತ್ವದಲ್ಲೂ ಆಫ್ರಿಕಾ ತಂಡ ವಿಶ್ವಕಪ್ ಗೆಲ್ಲದಿರಬಹುದು. ಅಷ್ಟಕ್ಕೂ ತಂಡದ ಯಶಸ್ಸು ಕೇವಲ ವಿಶ್ವಕಪ್ ಗೆಲುವೊಂದರಿಂದಲೇ ನಿರ್ಧಾರವಾಗುವುದಿಲ್ಲ. ಆದರೆ, ಈ ಒಂದು ದಶಕದಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ ಅನೇಕ ಮೈಲಿಗಲ್ಲುಗಳಿಗೆ ಸ್ಮಿತ್ ಸಾಕ್ಷಿಯಾಗಿದ್ದಾರೆ. ಪೊಲಾಕ್ ಬೆನ್ನೆಲುಬಾಗಿ ನಿಂತದ್ದರಲ್ಲಿ, ಗಿಬ್ಸ್ ಅಬ್ಬರಿಸಿದ್ದರಲ್ಲಿ, ಮಕಾಯ್ ಯ್ಯಾಂಟನಿ, ಸ್ಟೇಯ್ನ್, ಫಿಲ್ಯಾಂಡರ್ ಭಯಾನಕರಾಗಿ ಕಂಗೊಳಿಸಿದ್ದರಲ್ಲಿ, ಎಬಿ ಡವಿಲಿಯರ್ಸ್ ಆಶಾವಾದವಾಗಿ ಮಿಂಚಿದ್ದರಲ್ಲೆಲ್ಲಾ ಸ್ಮಿತ್ ಕೈಚಳಕವಿದೆ. ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ದಾಖಲೆ ರನ್ ಬೆನ್ನಟ್ಟಿ ಗೆದ್ದಿದ್ದರ ಹಿಂದೆ ಸ್ಮಿತ್ ತುಂಬಿದ ಸ್ಫೂರ್ತಿಯ ಆತ್ಮವಿಶ್ವಾಸವಿದೆ. ಇಂದು ಆತ ವಿಶ್ವದಾಖಲೆಯ ನಾಯಕ.
ಅತ್ಯಂತ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಆಡಿದ ವಿಶ್ವ ದಾಖಲೆ -102 ಟೆಸ್ಟ್,
(101 ಟೆಸ್ಟ್ ದಕ್ಷಿಣ ಆಫ್ರಿಕಾ ಪರ, 1 ಟೆಸ್ಟ್ ಐಸಿಸಿ ತಂಡದ ಪರ)
ನಾಯಕನಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ -50 ಟೆಸ್ಟ್
ನಾಯಕನಾಗಿ ಗೆದ್ದಿರುವ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಹೊಡೆದ ವಿಶ್ವದಾಖಲೆ- 15 ಶತಕ
ಗೆದ್ದಿರುವ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಅನ್ನು ಹೊರತುಪಡಿಸಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಶ್ವದಾಖಲೆ- 82 ಕ್ಯಾಚ್
ಗಣೇಶ್ ಪ್ರಸಾದ್ ಕುಂಬ್ಳೆ