ಏ.20ರಿಂದ ತಾತಂಡ ಹಾಕಿ ಪಂದ್ಯಾವಳಿ
ಬೆಂಗಳೂರು: ಕೊಡಗಿನ ವಿರಾಜಪೇಟೆ ತತ್ತಾಂಡ ಕುಟುಂಬದಿಂದ ತಾತಂಡ ಹಾಕಿ ಪಂದ್ಯಾವಳಿಯನ್ನು ಏ.20ರಿಂದ ವಿರಾಜಪೇಟೆಯಲ್ಲಿ ಆರಂಭಿಸಲಾಗಿದೆ ಎಂದು ಕುಟುಂಬದ ಮುಖ್ಯಸ್ಥ ತತ್ತಾಂಡ ನಾಣಯ್ಯ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾತಂಡ ಕುಟುಂಬ ನಡೆಸಿದ 18ನೇ ಹಾಕಿ ಪಂದ್ಯಾವಳಿ ಇದಾಗಿದೆ. ಇದನ್ನು ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಪಂದ್ಯಾವಳಿ ಒಂದು ತಿಂಗಳ ಕಾಲ ನಡೆಯಲಿದೆ ಎಂದರು. 325 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡದಲ್ಲೂ ಕುಟುಂಬದ ಸದಸ್ಯರು ಆಟವಾಡಲಿದ್ದಾರೆ. ಒಂದು ತಂಡದಲ್ಲಿ 15 ಜನರು ಇರುತ್ತಾರೆ. ಒಂದು ತಿಂಗಳ ಕಾಲ ನಡೆಯುವ ಈ ಪಂದ್ಯಾವಳಿ ಕೊನೆ ಪಂದ್ಯಕ್ಕೆ 60 ಸಾವಿರ ಜನರು ಸೇರುತ್ತಾರೆ ಎಂದು ಹೇಳಿದರು.
ಪ್ರವೇಶ ಶುಲ್ಕ ಬಿಟ್ಟರೆ ಇನ್ನಾವುದೇ ರೀತಿ ಹಣ ಪಾವತಿ ಮಾಡಬೇಕೆಂದಿಲ್ಲ. ಹಾಕಿ ನಮ್ಮ ರಾಷ್ಟ್ರೀಯ ಕ್ರೀಡೆ. ಕ್ರೀಡೆ ಬಗ್ಗೆ ಇನ್ನಷ್ಟು ಆಸಕ್ತಿ ಬೆಳೆಸಿ ಮರೆಗೆ ಸಾಗುತ್ತಿರುವ ಈ ಕ್ರೀಡೆಯನ್ನು ಹೆಚ್ಚಿನ ಜನರಿಗೆ ತಲುಪಿಸುವುದು ಪಂದ್ಯಾವಳಿಯ ಉದ್ದೇಶ ಎಂದರು.
ಹೊಸ ಜವಾಬ್ದಾರಿ ಬಗ್ಗೆ ಮಾಜಿ
ಆಟಗಾರರು ನಿರ್ಧರಿಸಲಿ: ಗಂಗೂಲಿ
ಕೋಲ್ಕತಾ: ಭಾರತದ ಮಾಜಿ ಆಟಗಾರರು ಸಿದ್ಧರಿದ್ದರೆ ಅವರನ್ನು ಭಾರತ ತಂಡದ ಬೆಳವಣಿಗೆಗೆ ಕಾಣಿಕೆ ನೀಡಲು ಜವಾಬ್ದಾರಿ ನೀಡಬಹುದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತ ತಂಡದ ಕೋಚ್ ಸ್ಥಾನಕ್ಕೆ ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಅವರ ಹೆಸರು ಸೂಚಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ದ್ರಾವಿಡ್, ಸಚಿನ್, ಅನಿಲ್ ಕುಂಬ್ಳೆಯಂತಹ ಆಟಗಾರರಿರುವಾಗ ಅವರಿಗೆ ಭಾರತ ತಂಡದ ಜವಾಬ್ದಾರಿ ನೀಡಬಹುದು. ಆದರೆ ಅವರು ಸಿದ್ಧರಿದ್ದಾರೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಆದರೆ ಈ ನಿರ್ಧಾರ ಅವರವರ ವೈಯಕ್ತಿಕವಾಗಿರಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ದ್ರಾವಿಡ್ ಹೇಳಿರುವಂತೆ ಆತ ಈಗಷ್ಟೇ ನಿವೃತ್ತಿ ಪಡೆದಿದ್ದಾರೆ. ಕೇವಲ 11 ತಿಂಗಳ ಅಂತರದಲ್ಲಿ ಈ ಜವಾಬ್ದಾರಿ ನಿರ್ವಹಿಸುವುದು ಕಷ್ಟದ ಕೆಲಸವಾಗಲಿದೆ. ಈ ರೀತಿ ಪಾಕಿಸ್ತಾನ ತಂಡಕ್ಕೆ ವಕಾರ್ ಯೂನಿಸ್ ಕೋಚ್ ಆಗಿದ್ದರು. ಅವರು ಸಹ ಹಲವು ಸಮಸ್ಯೆಗಳನ್ನು ಎದುರಿಸಿದ್ದರು ಗಂಗೂಲಿ ತಿಳಿಸಿದ್ದಾರೆ.
'ವೇಗದ ಬೌಲರ್ಗಳನ್ನು ಹೆಚ್ಚು ಕಾಡಿದ್ದು ಸಚಿನ್'
ಮುಂಬೈ: ಭಾರತ ಕ್ರಿಕೆಟ್ ತಂಡದ ಪರ ವೇಗದ ಬೌಲರ್ಗಳನ್ನು ಕಾಡಲು ಆರಂಭಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಮೊದಲಿಗರು ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ವೇಗದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಮೆಟ್ಟಿನಿಂತಿದ್ದು, ಸಚಿನ್ ತೆಂಡೂಲ್ಕರ್. ಸಚಿನ್ ವೇಗದ ಬೌಲರ್ಗಳನ್ನು ಕಾಡುವ ಬಗೆಗೆ ಭಾರತೀಯ ಕ್ರಿಕೆಟ್ನಲ್ಲಿ ಒಂದು ಹೊಸ ಅಧ್ಯಾಯ ಬರೆದರು. 80 ಹಾಗೂ 90ರ ದಶಕದಲ್ಲಿ ಉತ್ತಮ ವೇಗದ ಬೌಲರ್ಗಳಿದ್ದರು. ಆ ಸಮಯದಲ್ಲಿ ಸಚಿನ್ ವೇಗದ ದಾಳಿಯನ್ನು ಕಾಡಿದ ಬಗೆ ವಿಭಿನ್ನವಾಗಿತ್ತಲ್ಲದೇ ಹೊಸ ಅಲೆಯನ್ನು ನಿರ್ಮಿಸಿದರು ಎಂದು ದ್ರಾವಿಡ್ ತಿಳಿಸಿದ್ದಾರೆ. ಗವಾಸ್ಕರ್ ವಿಭಿನ್ನ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಸಚಿನ್ ಬೆಳೆದಿದ್ದು, ಹೊಸ ಯುಗದಲ್ಲಿ. ಸಚಿನ್ ತೆಡೂಲ್ಕರ್ ವೇಗದ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಂತ ಶೈಲಿ ಹಲವಾರು ಆಟಗಾರರಿಗೆ ಸ್ಫೂರ್ತಿಯಾಗಿದೆ. ಸೆಹ್ವಾಗ್ರಂತಹ ಬ್ಯಾಟ್ಸ್ಮನ್ಗಳು ಸಹ ಸ್ಫೂರ್ತಿ ಪಡೆದಿದ್ದಾರೆ. ಸಚಿನ್ ಡ್ರಿಸಿಂಗ್ ರೂಮ್ನಲ್ಲಿದ್ದರೆ. ತಂಡಕ್ಕೆ ಸ್ಫೂರ್ತಿಯ ಜತೆಗೆ ಯುವ ಆಟಗಾರರು ಉತ್ತಮ ಪರಿಶ್ರಮ ಹಾಕುತ್ತಿದ್ದರು ಎಂದು ದ್ರಾವಿಡ್ ತಿಳಿಸಿದ್ದಾರೆ.
ಹೆಚ್ಚು ಟೆಸ್ಟ್ ಆಡಬೇಕು: ಸಚಿನ್
ಮುಂಬೈ: ಕ್ರಿಕೆಟ್ನ ಸಾಂಪ್ರದಾಯಿಕ ಮಾದರಿಯಾದ ಟೆಸ್ಟ್ ಕ್ರಿಕೆಟ್ ಅನ್ನು ಉಳಿಸಲು ಐಸಿಸಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. ಐಸಿಸಿ ಟೆಸ್ಟ್ ಕ್ರಿಕೆಟ್ನ ಉಳಿವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗಾಗಿ ಐಸಿಸಿ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ನಡೆಸಬೇಕು. ಟೆಸ್ಟ್ ಕ್ರಿಕೆಟ್ ಪ್ರಸ್ತುತ ಉತ್ತಮ ಸ್ಥಿತಿಯಲ್ಲಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಫಲಿತಾಂಶ ನೀಡುತ್ತಿದ್ದು, ಜನರು ಆನಂದಿಸುತ್ತಿದ್ದಾರೆ ಎಂದು ಸಚಿನ್ ಅಭಿಪ್ರಾಯಪಟ್ಟರು. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಟೆಸ್ಟ್ ಕ್ರಿಕೆಟ್ ನೋಡುವುದಾದರೆ, ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಫಲಿತಾಂಶ ಹೊರ ಬೀಳುತ್ತಿದೆ. ಕೆಲವೇ ಕೆಲವು ಪಂದ್ಯಗಳ ಡ್ರಾನಲ್ಲಿ ಅಂತ್ಯಗೊಳ್ಳುತ್ತಿವೆ. ಟಿ20 ಪಂದ್ಯಾವಳಿ ಆರಂಭಿಸಿದ ನಂತರ ಟೆಸ್ಟ್ನಲ್ಲಿ ಈ ಬದಲಾವಣೆ ಕಂಡಿದ್ದು, ಎರಡೂ ಮಾದರಿಗಳು ಉತ್ತಮವಾಗಿ ಅಭಿಮಾನಿಗಳನ್ನು ರಂಜಿಸುತ್ತಿವೆ ಎಂದು ಸಚಿನ್ ತಿಳಿಸಿದರು. ಹೆಚ್ಚಿನ ಜನ ಕ್ರಿಕೆಟ್ ಅನ್ನು ವೀಕ್ಷಿಸಬೇಕಾದರೆ, ಟಿ20 ಉತ್ತಮ ಮಾದರಿಯಾಗಿದೆ. ಟಿ20 ಹೊಸ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ನಂತರ ಅವರು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನತ್ತ ಮುಖ ಮಾಡುತ್ತಾರೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.