ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿರು ಕದನ ಗೆಲ್ಲೋರ್ಯಾರು?

ಕಳೆದ ಕೆಲವು ತಿಂಗಳಿನಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಟಿ20 ವಿಶ್ವಕಪ್‌ನ ಸೂಪರ್ 10...

Vishwanath S
Updated On : 16 Mar 2014, 1:15 am

ಮೀರ್‌ಪುರ: ಕಳೆದ ಕೆಲವು ತಿಂಗಳಿನಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ ಟಿ20 ವಿಶ್ವಕಪ್‌ನ ಸೂಪರ್ 10 ಹಂತದಿಂದಲೇ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರಾಗಲಿದ್ದು, ಪಂದ್ಯಾವಳಿಯಲ್ಲಿ ಕಠಿಣ ಸವಾಲು ಎದುರಾಗಲಿವೆ.
ಪ್ರಸಕ್ತ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಎ ಗುಂಪಿನಲ್ಲಿದ್ದ ಆರಂಭದಲ್ಲೇ ಭಾರತಕ್ಕೆ ಸವಾಲು ನೀಡಲು ಸಿದ್ಧವಾಗಿದೆ.  ಪಾಕ್ ಹಾಗೂ ಆಸ್ಟ್ರೇಲಿಯಾ ಜತೆಗೆ ಕಳೆದ ಎರಡು ಆವೃತ್ತಿಯಲ್ಲಿ ರನ್ನರ್ ಅಪ್ ಆಗಿರುವ ಶ್ರೀಲಂಕಾ ತಂಡವು ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲು ತಯಾರಿ ನಡೆಸಿದೆ. ಅಲ್ಲದೆ ನ್ಯೂಜಿಲೆಂಡ್ ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದೆ ಅಲ್ಲದೆ ಕೋರೆ ಆ್ಯಂಡರ್‌ಸನ್‌ರಂತಹ ಸ್ಫೋಟಕ ಆಲ್ರೌಂಡರ್ ತಂಡದ ಬಲವಾಗಿದ್ದಾರೆ. ಕಿವೀಸ್ ಜತೆಗೆ ಇನ್ನು ಎಬಿ ಡಿವಿಲಿಯರ್ಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವೂ ಐಸಿಸಿಯ ಅತ್ಯುನ್ನತ ಪ್ರಶಸ್ತಿಗೆ ಮೊದಲ ಬಾರಿಗೆ ಮುತ್ತಿಕ್ಕಲು ಹವಣಿಸುತ್ತಿವೆ.
ಈ ಎಲ್ಲಾ ತಂಡಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದು ಪ್ರಶಸ್ತಿಯನ್ನು ಗೆಲ್ಲುವ ಆತ್ಮ ವಿಶ್ವಾಸದಲ್ಲಿವೆ. ಆದರೆ ಭಾರತ ತಂಡದ ಪರಿಸ್ಥಿತಿ ಈ ಎಲ್ಲಾ ತಂಡಕ್ಕಿಂತಲೂ ಭಿನ್ನವಾಗಿದೆ. ಭಾರತ ತಂಡ ಟಿ20 ಪಂದ್ಯವನ್ನಾಡಿ ಸುಮಾರು ಐದು ತಿಂಗಳಿಗೂ ಹೆಚ್ಚಿನ ಕಾಲವಾಗಿದೆ. ಭಾರತ ಕಡೆಯ ಬಾರಿಗೆ ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಅಬ್ಬರದ ಬ್ಯಾಟಿಂಗ್‌ನಿಂದ ಭಾರತ 6 ವಿಕೆಟ್‌ಗಳ ಗೆಲವು ದಾಖಲಿಸಿತ್ತು.
ಇನ್ನು ಭಾರತ ತಂಡ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲುಗಳು ನಂತರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಸೋಲು ಭಾರತ ತಂಡದ ಆತ್ಮ ವಿಶ್ವಾಸವನ್ನು ಕುಗ್ಗಿಸಿದೆ. ಭಾರತ ತಂಡ 2014ರಲ್ಲಿನ ಎರಡೂವರೆ ತಿಂಗಳ ಅವಧಿಯಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಮಾತ್ರ ಗೆಲವು ಕಂಡಿದ್ದು, ಉಳಿದಂತೆ ನೀರಸ ಪ್ರದರ್ಶನ ನೀಡಿದೆ.
ಇನ್ನು ಭಾರತ ತಂಡದ ಬೌಲಿಂಗ್ ವಿಭಾಗ ಎಂದಿನಂತೆ ಸಮಸ್ಯೆಯಿಂದ ಕೂಡಿದೆ. ಇನ್ನು ಇತ್ತೀಚೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಹ ಫಾರ್ಮ್ ಕಳೆದುಕೊಂಡು ಬ್ಯಾಟಿಂಗ್ ವಿಭಾಗ ಸಹ ತನ್ನ ಸಮತೋಲನ ಕಂಡುಕೊಂಡಿದೆ. ಆರಂಭಿಕರು ಸ್ಥಿರ ಪ್ರದಶಂನ ನೀಡುತ್ತಿಲ್ಲ. ಹಾಗಾಗಿ ಭಾರತ ಕೊಹ್ಲಿ ಹಾಗೂ ಧೋನಿಯ ಮೇಲೆ ಅಗತ್ಯಕ್ಕಿಂತ ಹೆಚ್ಚಾಗಿ ಅವಲಂಬಿಸುತ್ತಿದೆ.
ಭಾರತ ತಂಡ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮೀರ್‌ಪುರದಲ್ಲಿ ಎದುರಿಸುತ್ತಿದೆ. ಇದೇ ಅಂಗಣದಲ್ಲಿ ಭಾರತ ಹದಿನೈದು ದಿನಗಳ ಕೆಳಗೆ ಪಾಕ್ ವಿರುದ್ಧ ಮುಖಭಂಗ ಅನುಭವಿಸಿತ್ತು. ಅಲ್ಲದೆ ಭಾರತ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕ್ ವಿರುದ್ಧ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಗೆಲವಿನ ದಾಖಲೆಯನ್ನು ಹೆಚ್ಚಿಸಿಕೊಳ್ಳುವ ಒತ್ತಡವೂ ಭಾರತದ ಮೇಲಿದೆ.
ಭಾರತ ತಂಡ ಐದು ತಿಂಗಳಿನಿಂದ ಟಿ20 ಪಂದ್ಯವನ್ನಾಡಿಲ್ಲ. ಹಾಗಾಗಿ ವಿಶ್ವಕಪ್‌ಗೆ ಭಾರತದ ತಯಾರಿಯೂ ಉತ್ತಮವಾಗಿಲ್ಲ. ಹಾಗಾಗಿ ಭಾರತ ತಂಡ ಮಾ.17(ಶ್ರೀಲಂಕಾ) ಹಾಗೂ ಮಾ.19(ಇಂಗ್ಲೆಂಡ್) ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ತಂಡ ಸಿದ್ಧವಾಗಬೇಕಿದೆ. ಇನ್ನು ಭಾರತದ ಜತೆ ಎ ಗುಂಪಿನಲ್ಲಿ ಸ್ಥಾನ ಹಂಚಿ ಕೊಂಡಿರುವ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಟಿ30 ಪಂದ್ಯ, ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳನ್ನಾಡಿದ್ದು ಚುಟುಕು ಮಾದರಿಗೆ ಮಾನಸಿಕವಾಗಿ ಸಿದ್ಧವಾಗಿವೆ.
ಒಟ್ಟಿನಲ್ಲಿ ಭಾರತ ತಂಡ ಒತ್ತಡದೊಂದಿಗೆ ಪಂದ್ಯಾವಳಿಗೆ ತೆರಳುತ್ತಿದ್ದು, ಕಠಿಣ ಸಾವಲುಗಳನ್ನು ಯಾವ ರೀತಿ ಮೆಟ್ಟಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕು.
ಪಂದ್ಯಾವಳಿಯ ನಿಯಮಗಳು
ಅರ್ಹತಾ ಸುತ್ತು
ಒಂದು ವೇಳೆ ಈ ಹಂತದಲ್ಲಿ ತಂಡಗಳ ಅಂಕಗಳು ಸಮನಾಗಿದ್ದರೆ, ಈ ಕೆಳಗಿನ ಅಂಶಗಳ ಆಧಾರದ ಮೇಲೆ ಸೂಪರ್ 10ಗೆ ಅರ್ಹತೆ ಪಡೆಯಲಿದೆ.
ಗುಂಪಿನಲ್ಲಿ ಹೆಚ್ಚು ಗೆಲವು ದಾಖಲಿಸಿದ ತಂಡಕ್ಕೆ ಮೊದಲ ಆದ್ಯತೆ.
ಒಂದುವೇಳೆ ಅಂಕ ಹಾಗೂ ಪಂದ್ಯ ಗೆದ್ದ ಸಂಖ್ಯೆ ಸಮನಾದರೆ, ಹೆಚ್ಚಿನ ರನ್‌ರೇಟ್ ಪರಿಗಣನೆ.
ರನ್‌ರೇಟ್ ಸಹ ಸಮನಾಗಿದ್ದರೆ, ಆ ಗುಂಪಿನಲ್ಲಿ ಉಭಯ ತಂಡಗಳ ನಡುವೆ ನಡೆದ ಪಂದ್ಯದ ಫಲಿತಾಂಶ ಗಣನೆಗೆ.
ನಂತರವೂ ಫಲಿತಾಂಶ ಖಚಿತವಾಗದಿದ್ದರೆ, ಗುಂಪಿನಲ್ಲಿ ಯಾವ ತಂಡ ಐಸಿಸಿ ರ್ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನ ಪಡೆದಿರುತ್ತದೊ ಆ ತಂಡ ಸೂಪರ್ 10ಕ್ಕೆ ಪ್ರವೇಶ ಪಡೆಯಲಿದೆ.
ಸೂಪರ್ 10 ಸುತ್ತು
ಒಂದು ವೇಳೆ ಈ ಹಂತದಲ್ಲಿ ತಂಡಗಳ ಅಂಕಗಳು ಸಮನಾಗಿದ್ದರೆ, ಈ ಕೆಳಗಿನ ಅಂಶಗಳ ಆಧಾರದ ಮೇಲೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.
ಗುಂಪಿನಲ್ಲಿ ಹೆಚ್ಚು ಗೆಲವು ದಾಖಲಿಸಿದ ತಂಡ.
ಒಂದುವೇಳೆ ಅಂಕ ಹಾಗೂ ಪಂದ್ಯ ಗೆದ್ದ ಸಂಖ್ಯೆ ಸಮನಾದರೆ, ಹೆಚ್ಚಿನ ರನ್‌ರೇಟ್ ಪರಿಗಣನೆ.
ರನ್‌ರೇಟ್ ಸಹ ಸಮನಾಗಿದ್ದರೆ, ಆ ಗುಂಪಿನಲ್ಲಿ ಉಭಯ ತಂಡಗಳ ನಡುವೆ ನಡೆದ ಪಂದ್ಯದ ಫಲಿತಾಂಶ ಗಣನೆಗೆ.
ನಂತರವೂ ಸಿಶ್ಚಳ ತಂಡ ನಿರ್ಧಾರವಾಗದಿದ್ದರೆ, ಗುಂಪಿನಲ್ಲಿ ಯಾವ ತಂಡ ಉನ್ನತ ಶ್ರೇಯಾಂಕ ಪಡೆದಿರುತ್ತದೊ ಆ ತಂಡ ಸೂಪರ್ 10ಕ್ಕೆ ಪ್ರವೇಶ ಪಡೆಯಲಿದೆ.
ಸೆಮಿಫೈನಲ್
ಈ ಪಂದ್ಯದಲ್ಲಿ ಟೈ ಫಲಿತಾಂಶ ಪಡೆದರೆ, ಸೂಪರ್ ಓವರ್ ಮೊರೆ ಹೋಗಲಾಗುವುದು.
ಸೂಪರ್ ಓವರ್ ಟೈ ಆದಲ್ಲಿ ಅಥವಾ ಪಂದ್ಯ ಇತರೆ ಕಾರಣಗಳಿಂದ ರದ್ದಾದಲ್ಲಿ, ಸೂಪರ್ 10 ಹಂತದಲ್ಲಿ ಯಾವ ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುತ್ತದೊ ಆ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಫೈನಲ್
ಈ ಪಂದ್ಯ ದಲ್ಲಿ ಟೈ ಫಲಿತಾಂಶ ಪಡೆದರೆ, ಸೂಪರ್ ಓವರ್ ನೀಡಲಾಗುವುದು.
ಸೂಪರ್ ಓವರ್ ಟೈ ಆದಲ್ಲಿ ಅಥವಾ ಪಂದ್ಯ ಇತರೆ ಕಾರಣಗಳಿಂದ ರದ್ದಾದಲ್ಲಿ, ಉಭಯ ತಂಡಗಳನ್ನು ಜಂಟಿಯಾಗಿ ಚಾಂಪಿಯನ್ ಎಂದು ಪ್ರಕಟಿಸಲಾಗುವುದು.
ಈ ಬಾರಿ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿದೆ. ಈ ಬಾರಿಯ ಚುಟುಕು ಕ್ರಿಕೆಟ್ ಹಬ್ಬ 20 ದಿನಗಳ ಕಾಲ ನಡೆಯಲಿದ್ದು, ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಅಲ್ಲದೆ ವೆಸ್ಟ್ ಇಂಡೀಸ್ ತಂಡ ಈ ಬಾರಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ ಎಂಟು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಸೂಪರ್ 10 ಹಂತದಲ್ಲಿ ಐಸಿಸಿಯ ಅಗ್ರ ಎಂಟು ತಂಡಗಳನ್ನು ಸೇರಿಕೊಳ್ಳಲಿದೆ. ಹಾಗಾಗಿ ಪಂದ್ಯಾವಳಿಯಲ್ಲಿ ಒಟ್ಟು 35 ಪಂದ್ಯಗಳು ನಡೆಯಲಿವೆ. ಈ ಬಾರಿ ಸೂಪರ್ 10 ಹಂತದಲ್ಲಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 5 ತಂಡಗಳಿವೆ. ಈ ಉಭಯ ಗುಂಪಿನಲ್ಲಿ ಅಗ್ರ ಎರಡು ಸ್ಥಾನವನ್ನು ಪಡೆಯುವ ತಂಡಗಳು ಉಪಾಂತ್ಯಕ್ಕೆ ತಲುಪಲಿವೆ.
ಟಿ20 ವಿಶ್ವಕಪ್‌ನಲ್ಲಿ ಇತರೆ ದಾಖಲೆಗಳು
2007ರಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 6 ವಿಕೆಟ್‌ಗೆ 260 ರನ್ ದಾಖಲು.
2007ರಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್‌ಗೆ ಒಂದೇ ಓವರ್‌ನಲ್ಲಿ 6 ಸಿಕ್ಸರ್.
2010ರಲ್ಲಿ ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್ ತಂಡವನ್ನು 68 ರನ್‌ಗೆ ಆಲೌಟ್ ಮಾಡಿತ್ತು.
2012ರಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಂ ಬಾಗ್ಲಾದೇಶದ ವಿರುದ್ಧ 123 ರನ್ ದಾಖಲಿಸಿದ್ದು ಗರಿಷ್ಠ.
ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಂ, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಯ್ಲ್, ಭಾರತದ ಸುರೇಶ್ ರೈನಾ, ಶ್ರೀಲಂಕಾದ ಮಹೆಲಾ ಜಯವರ್ದನೆ ಶತಕ ದಾಖಲಿಸಿದ ಬ್ಯಾಟ್ಸ್‌ಮನ್‌ಗಳು.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಕ್ರೀಸ್ ಗೇಯ್ಲ್(43) ಪಾಲಾಗಿದೆ.
2007ರಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಯ್ಲ್ ದಕ್ಷಿಣ ಆಫ್ರೀಕಾ ವಿರುದ್ಧ 10 ಸಿಕ್ಸರ್ ಬಾರಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ಸಿಕ್ಸರ್.

2007 ಹರಿಣಗಳ ನಾಡಲ್ಲಿ ಭಾರತದ ಸಾಮ್ರಾಜ್ಯ
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟಿ20 ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. 13 ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ 12 ರಾಷ್ಟ್ರಗಳು ಭಾಗವಹಿಸಿದ್ದವು. ಒಟ್ಟು 27 ಪಂದ್ಯಗಲು ನಡೆದಿದ್ದವು. ಭಾರತ ಮತ್ತು ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದವು. ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 5 ರನ್ ಅಂತರದಿಂದ ಜಯ ಸಾಧಿಸಿದ್ದ ಧೋನಿ ಬಾಯ್ಸ್ ಸಂಭ್ರಮಪಟ್ಟಿದ್ದರು.  ಅಚ್ಚರಿಯ ವಿಷಯವೆಂದರೆ, ಆಗ ತಾನೆ ಏಕದಿನ ವಿಶ್ವಕಪ್ ಲೀಗ್ ಹಂತದಲ್ಲಿ ಸೋಲನುಭವಿಸಿದ್ದ ಭಾರತ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ (265) ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು. ಪಾಕ್‌ನ ಉಮರ್ ಗುಲ್ (13) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು.

2009 ಆಂಗ್ಲರ ಅಂಗಳದಲ್ಲ್ಲಿ ಪಾಕ್ ಪರಾಕ್ರಮ
2ನೇ ಆವೃತ್ತಿಯ ಆತಿಥ್ಯವನ್ನು ಇಂಗ್ಲೆಂಡ್ ವಹಿಸಿದ್ದು, ಸಹ 12 ತಂಡಗಳು ಭಾಗವಹಿಸಿದ್ದವು. ವಿಶೇಷವೆಂದರೆ, ಪುರುಷರ ಟಿ20 ವಿಶ್ವಕಪ್ ಜತೆಯಲ್ಲೇ ಮಹಿಳೆಯರ ಟಿ20 ವಿಶ್ವಕಪ್ ಆಯೋಜಿಸಲಾಗಿತ್ತು. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಿದ್ದವು. ಪಾಕಿಸ್ತಾನ ತಂಡ 8 ವಿಕೆಟ್ ಅಂತರದಿಂದ ಚಾಂಪಿಯನ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ (317) ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದರು. ಎರಡನೇ ಟಿ20 ವಿಶ್ವಕಪ್‌ನಲ್ಲೂ ಬೌಲಿಂಗ್ ಪಾರಮ್ಯ ಮೆರೆದಿದ್ದ ಪಾಕಿಸ್ತಾನದ ಉಮರ್ ಗುಲ್ (13) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲನುಭವಿಸಿ ಆಘಾತ ಅನುಭವಿಸಿದ್ದ ಪಾಕ್ ಚಾಂಪಿಯನ್ ಆಯಿತು.
2010 ಇಂಗ್ಲೆಂಡ್ ಮಡಿಲಿಗೆ ಮೊದಲ ವಿಶ್ವಕಪ್
ಮೂರನೇ ಆವೃತ್ತಿಯ ಟಿ20 ವಿಶ್ವಕಪ್ ಪಂದ್ಯಾವಳಿಯು ವೆಸ್ಟ್ ಇಂಡೀಸ್‌ನಲ್ಲಿ ನಡೆಯಿತು. ಈ ಆವೃತ್ತಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. 2011ರಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ಇದ್ದ ಕಾರಣ ಈ ಆವೃತ್ತಿಯನ್ನು 2010ರಲ್ಲೇ ನಡೆಸಲಾಯಿತು. ಈ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡಿದ್ದವು. ಅಂತಿಮವಾಗಿ ಇಂಗ್ಲೆಂಡ್ ತಂಡ 7 ವಿಕೆಟ್‌ಗಳ ಗೆಲವು ದಾಖಲಿಸಿತು. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿತು. ಇಂಗ್ಲೆಂಡ್ ತಂಡದ ಕೆವಿನ್ ಪೀಟರ್‌ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

2012 ದ್ವೀಪ ರಾಷ್ಟ್ರದಲ್ಲಿ ಪ್ರಕಾಶಿಸಿದ ವಿಂಡೀಸ್
2012ರಲ್ಲಿ ನಡೆದ ನಾಲ್ಕನೇ ಟಿ20 ವಿಶ್ವಕಪ್ ಪಂದ್ಯಾವಳಿ ಶ್ರೀಲಂಕಾದಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲೂ 12 ತಂಡಗಳು ಭಾಗವಹಿಸಿದ್ದವು. ಈ ಬಾರಿ ವೆಸ್ಟ್ ಇಂಡೀಸ್ ತಂಡವು ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.  ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್(137) ಅಲ್ಪ ಮೊತ್ತ ಕಲೆ ಹಾಕಿ ಒತ್ತಡಕ್ಕೆ ಸಿಲುಕಿತು. ಆದರೆ ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ ತಂಡವನ್ನು ಕಾಡಿದ ಕೆರಿಬಿಯನ್ನರು 101 ರನ್‌ಗಳಿಗೆ ನಿಯಂತ್ರಿಸಿ ರೋಚಕವಾಗಿ ಪಂದ್ಯವನ್ನು ಗೆದ್ದು ಬೀಗಿತು. ಈ ಗೆಲವಿನಿಂದ ವೆಸ್ಟ್ ಇಂಡೀಸ್ ದಶಕಗಳ ನಂತರ ವಿಶ್ವಕಪ್ ಎತ್ತಿ ಹಿಡಿಯಿತು.

ವೇಳಾಪಟ್ಟಿ
ಅರ್ಹತಾ ಹಂತ

ದಿನಾಂಕ            ಪಂದ್ಯಗಳು                           ಸ್ಥಳ    
ಮಾ.16    ಬಾಂಗ್ಲಾದೇಶ-ಅಫ್ಘಾನಿಸ್ತಾನ    ಮೀರ್‌ಪುರ
ಮಾ.16    ಹಾಂಕಾಂಗ್-ನೇಪಾಳ    ಚಿತ್ತಗಾಂಗ್
ಮಾ.17    ಐರ್ಲೆಂಡ್-ಜಿಂಬಾಬ್ವೆ    ಸಿಲ್‌ಹೆಟ್
ಮಾ.17    ನೆದರ್ಲೆಂಡ್-ಯುಎಇ    ಸಿಲ್‌ಹೆಟ್
ಮಾ.18    ಅಫ್ಘಾನಿಸ್ತಾನ-ಹಾಂಕಾಂಗ್    ಚಿತ್ತಗಾಂಗ್
ಮಾ.18    ಬಾಂಗ್ಲಾದೇಶ-ನೇಪಾಳ    ಚಿತ್ತಗಾಂಗ್
ಮಾ.19    ನೆದರ್ಲೆಂಡ್-ಜಿಂಬಾಬ್ವೆ    ಸಿಲ್‌ಹೆಟ್
ಮಾ.19    ಐರ್ಲೆಂಡ್-ಯುಎಇ    ಸಿಲ್‌ಹೆಟ್
ಮಾ.20    ಅಫ್ಘಾನಿಸ್ತಾನ-ನೇಪಾಳ    ಚಿತ್ತಗಾಂಗ್
ಮಾ.20    ಬಾಂಗ್ಲಾದೇಶ-ಹಾಂಕಾಂಗ್    ಚಿತ್ತಗಾಂಗ್
ಮಾ.21    ಜಿಂಬಾಬ್ವೆ-ಯುಎಇ    ಸಿಲ್‌ಹೆಟ್
ಮಾ.21    ಐರ್ಲೆಂಡ್-ನೆದರ್ಲೆಂಡ್    ಸಿಲ್‌ಹೆಟ್

ಸೂಪರ್10 ಹಂತ
ಮಾ.21    ಭಾರತ-ಪಾಕಿಸ್ತಾನ    ಮೀರ್‌ಪುರ
ಮಾ.22    ದಕ್ಷಿಣ ಆಫ್ರಿಕಾ-ಶ್ರೀಲಂಕಾ    ಚಿತ್ತಗಾಂಗ್
ಮಾ.22    ಇಂಗ್ಲೆಂಡ್-ನ್ಯೂಜಿಲೆಂಡ್    ಚಿತ್ತಗಾಂಗ್
ಮಾ.23    ಆಸ್ಟ್ರೇಲಿಯಾ-ಪಾಕಿಸ್ತಾನ    ಮೀರ್‌ಪುರ
ಮಾ.23    ಭಾರತ-ವೆಸ್ಟ್ ಇಂಡೀಸ್    ಮೀರ್‌ಪುರ
ಮಾ.24    ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ    ಚಿತ್ತಗಾಂಗ್
ಮಾ.24    ಶ್ರೀಲಂಕಾ-ಅರ್ಹತಾ ಬಿ1    ಚಿತ್ತಗಾಂಗ್
ಮಾ.25    ವೆಸ್ಟ್ ಇಂಡೀಸ್-ಅರ್ಹತಾ ಎ1    ಮೀರ್‌ಪುರ
ಮಾ.27    ದಕ್ಷಿಣ ಆಫ್ರಿಕಾ-ಅರ್ಹತಾ ಬಿ1    ಚಿತ್ತಗಾಂಗ್
ಮಾ.27    ಇಂಗ್ಲೆಂಡ್-ಶ್ರೀಲಂಕಾ    ಚಿತ್ತಗಾಂಗ್
ಮಾ.28    ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್    ಮೀರ್‌ಪುರ
ಮಾ.28    ಭಾರತ-ಅರ್ಹತಾ ಎ1    ಮೀರ್‌ಪುರ
ಮಾ.29    ನ್ಯೂಜಿಲೆಂಡ್-ಅರ್ಹತಾ ಬಿ1    ಚಿತ್ತಗಾಂಗ್
ಮಾ.29    ಇಂಗ್ಲೆಂಡ್-ದಕ್ಷಿಣ ಆಫ್ರಿಕಾ    ಚಿತ್ತಗಾಂಗ್
ಮಾ.30    ಪಾಕಿಸ್ತಾನ-ಅರ್ಹತಾ ಎ1    ಮೀರ್‌ಪುರ
ಮಾ.30    ಭಾರತ-ಆಸ್ಟ್ರೇಲಿಯಾ    ಮೀರ್‌ಪುರ
ಮಾ.31    ಇಂಗ್ಲೆಂಡ್-ಅರ್ಹತಾ ಬಿ1    ಚಿತ್ತಗಾಂಗ್
ಮಾ.31    ಶ್ರೀಲಂಕಾ-ನ್ಯೂಜಿಲೆಂಡ್    ಚಿತ್ತಗಾಂಗ್
ಏ.1    ಆಸ್ಟ್ರೇಲಿಯಾ-ಅರ್ಹತಾ ಎ1    ಮೀರ್‌ಪುರ
ಏ.1    ಪಾಕಿಸ್ತಾನ-ವೆಸ್ಟ್ ಇಂಡೀಸ್    ಮೀರ್‌ಪುರ
ಏ.3    ಮೊದಲ ಸೆಮಿಫೈನಲ್    ಮೀರ್‌ಪುರ
ಏ.4    ಎರಡನೇ ಸೆಮಿಫೈನಲ್    ಮೀರ್‌ಪುರ
ಏ.6    ಫೈನಲ್    ಮೀರ್‌ಪುರ

ಟಿ20 ವಿಶ್ವಕಪ್‌ನಲ್ಲಿ ಅಂಕಿ ಅಂಶಗಳು
ಅತಿ ಹೆಚ್ಚು ರನ್‌ಗಳಿಸಿದ ಐವರು ಬ್ಯಾಟ್ಸ್‌ಮನ್‌ಗಳು
ಆಟಗಾರ    ಪಂದ್ಯ    ರನ್    ಸರಾಸರಿ    ಗರಿಷ್ಠ
ಜಯವರ್ದನೆ    25    858    40.85    100
ಕ್ರಿಸ್ ಗೇಯ್    18    664    44.26    117
ದಿಲ್ಷಾನ್    25    632    30.09    96
ಸಂಗಕ್ಕಾರ    25    590    26.81    68
ಪೀಟರ್‌ಸನ್    15    580    44.61    79
ಅತಿ ಹೆಚ್ಚು ವಿಕೆಟ್ ಪಡೆದ 5  ಬೌಲರ್‌ಗಳು
ಆಟಗಾರ    ಪಂದ್ಯ    ವಿಕೆಟ್    ಸರಾಸರಿ    ಶ್ರೇಷ್ಠ ಸಾಧನೆ
ಮಾಲಿಂಗಾ    25    33    19.78    33ಕ್ಕೆ5
ಅಜ್ಮಲ್    19    32    15.46    19ಕ್ಕೆ4
ಮೆಂಡಿಸ್    18    31    13.48    8ಕ್ಕೆ6
ಅಫ್ರಿದಿ    26    31    22.25    11ಕ್ಕೆ4
ಉಮರ್ ಗುಲ್    20    29    16.58    6ಕ್ಕೆ5

ಅಂಕಗಳ ಮಾದರಿ
ಪಂದ್ಯ ಗೆದ್ದ ತಂಡಕ್ಕೆ 02 ಅಂಕ
ಪಂದ್ಯ ಟೈ/ಫಲಿತಾಂಶ ಬರದಿದ್ದರೆ/ರದ್ದಾದರೆ ಉಭಯ ತಂಡಗಳಿಗೂ ತಲಾ 01 ಅಂಕ
ಸೋತ ತಂಡಕ್ಕೆ 00 ಅಂಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement