ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೆಲವಿನ ಹೋಳಿ

ದೇಶೀಯ ಕ್ರಿಕೆಟ್‌ನಲ್ಲಿನ ತಮ್ಮ ಸಾರ್ವಭೌಮತೆಯನ್ನು ಕರ್ನಾಟಕದ ಆಟಗಾರರು ಮತ್ತೆ ಮುಂದುವರಿಸಿದ್ದಾರೆ...

Vishwanath S
Updated On : 17 Mar 2014, 1:20 am

ಕೋಲ್ಕತಾ: ದೇಶೀಯ ಕ್ರಿಕೆಟ್‌ನಲ್ಲಿನ ತಮ್ಮ ಸಾರ್ವಭೌಮತೆಯನ್ನು ಕರ್ನಾಟಕದ ಆಟಗಾರರು ಮತ್ತೆ ಮುಂದುವರಿಸಿದ್ದಾರೆ. 2013-14ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲೂ ಕನ್ನಡಿಗರು ಪ್ರಶಸ್ತಿಯ ಗರಿ ಮೂಡಿಸಿಕೊಂಡಿದ್ದಾರೆ. ಇದರೊಂದಿಗೆ ಒಂದೇ ಋತುವಿನಲ್ಲಿ ಸತತ ಮೂರನೇ ಪ್ರಶಸ್ತಿಯನ್ನೂ ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಕರ್ನಾಟಕದ ಕ್ರಿಕೆಟಿಗರು ಹೊಸ ಇತಿಹಾಸವನ್ನೇ ರಚಿಸಿದಂತಾಗಿದೆ.
ಇಲ್ಲಿನ ಪ್ರತಿಷ್ಠಿತ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಹುಡುಗರು 4 ವಿಕೆಟ್‌ಗಳಿಂದ ರೈಲ್ವೇಸ್ ತಂಡದ ಸವಾಲು ಹತ್ತಿಕ್ಕುವ ಮೂಲಕ ದೇಶೀಯ ಪಂದ್ಯಾವಳಿಯಲ್ಲಿ ಈ ಹೊಸ ಸಾಧನೆ ಮಾಡಿದರು.
ಇದೇ ಸಾಲಿನಲ್ಲಿ ಕರ್ನಾಟಕ, ರಣಜಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಬಳಿಕ ಇರಾನಿ ಟ್ರೋಫಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದೀಗ ಮೊದಲ ಬಾರಿಗೆ ಏಕದಿನ ಪಂದ್ಯಾವಳಿಯಲ್ಲೂ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ದೇಶೀಯ ಮಟ್ಟದಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಅದರಲ್ಲೂ ವಿನಯಕುಮಾರ್ ನಾಯಕತ್ವದಲ್ಲಿಯೇ ಕರ್ನಾಟಕ ಈ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು ಮತ್ತೊಂದು ಹೆಮ್ಮೆಯ ಸಂಗತಿ.
ಕರ್ನಾಟಕದ ಮಿಂಚಿನ ದಾಳಿ: ಅಲ್ಪ ಮೊತ್ತಕ್ಕೆ ಉರುಳಿದ ರೈಲ್ವೇಸ್: ಟಾಸ್ ಗೆದ್ದ ಕರ್ನಾಟಕ ತಂಡ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿತು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳದ ರೈಲ್ವೇಸ್ 157 ರನ್‌ಗಳ ಸಾಧಾರಣ ಮೊತ್ತಕ್ಕೆ ಪತನಗೊಂಡಿತು. ಕೆಳಕ್ರಮಾಂಕದ ಆಟಗಾರ ರಂಗ್‌ಸೇನ್ ಜೋನಾಥನ್ 57 ಎಸೆತಗಳಲ್ಲಿ 3 ಬೌಂಡರಿಗಳಿದ್ದ 46 ರನ್‌ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.ಪ್ರಮುಖವಾಗಿ ಅಗ್ರಕ್ರಮಾಂಕದ ದಾಂಡಿಗರು ಕೈಕೊಟ್ಟಿದ್ದರಿಂದ ರೈಲ್ವೇಸ್ ಪಡೆ ಅಲ್ಪ ಮೊತಕ್ಕೆ ಕುಸಿಯಿತು. ಅಗ್ರಕ್ರಮಾಂಕದ ಆರು ಬ್ಯಾಟ್ಸ್‌ಮನ್‌ಗಳ ಪೈಕಿ ಅರಿಂದಮ್ ಘೋಷ್ 33 ರನ್‌ಗಳಿಸಿದ್ದು ಉತ್ತಮ ಸಾಧನೆ ಎನಿಸಿತು.
ಕರ್ನಾಟಕದ ಬೌಲರ್‌ಗಳು ಈ ಪಂದ್ಯದಲ್ಲೂ ಸಂಘಟಿತ ದಾಳಿ ನಡೆಸಿ ಎದುರಾಳಿಗೆ ಸಿಡಿಯಲು ಅವಕಾಶ ನೀಡಲಿಲ್ಲ. ದಾಳಿಯಲ್ಲಿ ಗಮನ ಸೆಳೆದ ಅಭಿಮನ್ಯು ಮಿಥುನ್ 4 ವಿಕೆಟ್ ಉರುಳಿಸಿದರೆ, ಅಬ್ರಾರ್ ಖಾಜಿ ಮತ್ತು ರಾಬಿನ್ ಉತ್ತಪ್ಪ ತಲಾ 2 ಮತ್ತು ವಿನಯಕುಮಾರ್ 1 ವಿಕೆಟ್ ಕಬಳಿಸಿದರು.ಕರ್ನಾಟಕ ಕಾಪಾಡಿದ ನಾಯರ್: ಸಾಧಾರಣ ಗುರಿಯೆಡೆಗೆ ಸಾಗಿದ ಕರ್ನಾಟಕ ಇನ್ನೂ 7 ಓವರುಗಳು ಉಳಿದಿರುವಂತೆಯೇ 6 ವಿಕೆಟ್ ನಷ್ಟಕ್ಕೆ 158 ರನ್‌ಗಳಿಸಿ ಪ್ರಶಸ್ತಿಯ ಮೇಲೆ ತನ್ನ ಮೊಹರು ಒತ್ತಿತು.
ಆರಂಭದ ಒಂದು ಹಂತದಲ್ಲಿ ಕರ್ನಾಟಕದ ಸ್ಥಿತಿ ರೈಲ್ವೇಸ್‌ಗಿಂತಲೂ ಶೋಚನೀಯವಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ (38ರನ್, 72 ಎಸೆತ, 4 ಬೌಂಡರಿ) ಮತ್ತು ಕೆಳಕ್ರಮಾಂಕದಲ್ಲಿ ಕರುಣ್ ನಾಯರ್ (ಅಜೇಯ 53, 86 ಎಸೆತ, 4 ಬೌಂಡರಿ) ಎಚ್ಚರಿಕೆಯಿಂದ ರೈಲ್ವೇಸ್ ದಾಳಿಯನ್ನು ಎದುರಿಸಿ ಕರ್ನಾಟಕ ಗುರಿಯೆಡೆಗೆ ಸಾಗುವಲ್ಲಿ ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಆ ಮೂಲಕ ತಂಡವನ್ನು ಸೋಲಿನ ಅಪಾಯದಿಂದ ಪಾರುಮಾಡಿ ಮಾನ ಕಾಪಾಡಿದರು.ಇದಕ್ಕೂ ಮುನ್ನು ಕರ್ನಾಟಕ ಕೇವಲ 47 ರನ್‌ಗಳಾಗುವಷ್ಟರಲ್ಲಿಯೇ 5 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಇನಿಂಗ್ಸ್ ಆರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಮಾಯಾಂಕ್ ಅಗರ್‌ವಾಲ್ ಜೋಡಿ 21ರನ್‌ಗಳಾಗುವಷ್ಟರಲ್ಲಿ ಬೇರ್ಪಟ್ಟಿತು.
ಕಳೆದೆರೆಡು ಪಂದ್ಯಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದ ಉತ್ತಪ್ಪ ಇಲ್ಲಿ ಹ್ಯಾಟ್ರಿಕ್ ಶತಕ ಗಳಿಸಬಹುದೆಂಬುದು ಎಲ್ಲರ ಲೆಕ್ಕವಾಗಿತ್ತು. ಆದರೆ, ಅವರು ಕೇವಲ 8 ರನ್‌ಗಳಿಸಿ ಮೊದಲ ಬಲಿಯಾದರು. ಬಳಿಕ ಅಗರ್‌ವಾಲ್ (19), ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿಯೇ ಆಡಲು ಬಂದ ವಿನಯಕುಮಾರ್ (8) ಹಾಗೂ ಮಧ್ಯಮ ಹಂತದಲ್ಲಿ ಮನೀಷ್ ಪಾಂಡೆ (1) ಮತ್ತು ಗಣೇಶ್ ಸತೀಶ್ (2) ಪೆವಿಲಿಯನ್‌ಗೆ ಪೆರೇಡ್ ಮಾಡಿದಾಗ ತಂಡ ಸೋಲಿನ ಹಾದಿ ಹಿಡಿಯಿತು.  ಈ ಹಂತದಲ್ಲಿ ಜೊತೆಗೂಡಿದ ರಾಹುಲ್ ಮತ್ತು ಕರುಣ್ ಆರನೇ ವಿಕೆಟ್‌ಗೆ 66 ರನ್ ಸೇರಿಸಿ ತಂಡದ ಪರಿಸ್ಥಿತಿ ಕೊಂಚ ಉತ್ತಮ ಪಡಿಸಿದರು. ನಂತರ ಹೆಚ್ಚು ಹೊತ್ತು ನಿಲ್ಲದ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಕರ್ನಾಟಕಕ್ಕೆ ಗೆಲ್ಲಲು ಇನ್ನೂ 45 ರನ್‌ಗಳ ಅಗತ್ಯವಿತ್ತು. ಆದರೆ, ನಾಯರ್ ಮತ್ತು ಕುನಾಲ್ ಕಪೂರ್ (ಅಜೇಯ 24, 45 ಎಸೆತ, 2 ಬೌಂಡರಿ) ಮುರಿಯದ ಏಳನೇ ವಿಕೆಟ್‌ಗೆ ಗೆಲ್ಲಲು ಬೇಕಾಗಿದ್ದ ಉಳಿದ ರನ್‌ಗಳನ್ನು ಪೂರೈಸಿ ಕರ್ನಾಟಕದ ಆಸೆ ನೆರವೇರಿಸಿದರು. ಜೊತೆಗೆ ಗೆಲ್ಲುವ ವಿಶ್ವಾಸದಲ್ಲಿದ್ದ ರೈಲ್ವೇಸ್ ಆಸೆಯನ್ನೂ ಚಿವುಟಿ ಹಾಕಿದರು.
ರೈಲ್ವೇಸ್ ಪರ ಕೃಷ್ಣಕಾಂತ್ ಉಪಾಧ್ಯಾಯ 3 ಮತ್ತು ಅನುರೀತ್ ಸಿಂಗ್ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ರೈಲ್ವೇಸ್ 47.4 ಓವರುಗಳಲ್ಲಿ 157
ಅಮಿತ್ ಪೌಣಿಕರ್ ಸಿ ಗಣೇಶ್ ಬಿ ವಿನಯಕುಮಾರ್ 2, ಶಿವಕಾಂತ್ ಶುಕ್ಲಾ ಸಿ ಗಣೇಶ್ ಬಿ ಉತ್ತಪ್ಪ 21, ಅರಿಂದಮ್ ಘೋಷ್ ಸ್ಟಂಪ್ ರಾಹುಲ್ ಬಿ ಖಾಜಿ 33, ಮಹೇಶ್ ರಾವತ್ ಸಿ ರಾಹುಲ್ ಬಿ ಉತ್ತಪ್ಪ 4, ಆಶಿಶ್ ಯಾದವ್ ಸಿ ರಾಹುಲ್ ಬಿ ಮಿಥುನ್ 11, ಚಂದ್ರಪಾಲ್ ಸೈನಿ ಎಲ್‌ಬಿ ಬಿ ಖಾಜಿ 2, ರಂಗ್‌ಸೇನ್ ಜೋನಾಥನ್ ಸಿ ಪಾಂಡೆ ಬಿ ಮಿಥುನ್ 46, ಕರಣ್ ಶರ್ಮಾ ಸಿ ರಾಹುಲ್ ಬಿ ಮಿಥುನ್ 1, ಅಮಿತ್ ಮಿಶ್ರಾ ಸಿ ರಾಹುಲ್ ಬಿ ಮಿಥುನ್ 17, ಅನುರೀತ್ ಸಿಂಗ್ ರನೌಟ್ 11, ಕೃಷ್ಣಕಾಂತ್ ಉಪಾಧ್ಯಾಯ ಅಜೇಯ 1. ಇತರೆ: (ಬೈ-1, ವೈ-7) 8.
ವಿಕೆಟ್ ಪತನ: 1-13, 2-39, 3-50, 4-75, 5-79, 6-79, 7-83, 8-121, 9-155, 10-157.
ಬೌಲಿಂಗ್ ವಿವರ: ಆರ್. ವಿನಯಕುಮಾರ್ 9-1-35-1, ಅಭಿಮನ್ಯು ಮಿಥುನ್ 9.4-1-19-4, ಎಚ್.ಎಸ್. ಶರತ್ 9-0-45-0, ಅಬ್ರಾರ್ ಖಾಜಿ 12-2-27-2, ರಾಬಿನ್ ಉತ್ತಪ್ಪ 4-0-19-2, ಮನೀಷ್ ಪಾಂಡೆ 4-1-11-0.
ಕರ್ನಾಟಕ 43 ಓವರುಗಳಲ್ಲಿ 6 ವಿಕೆಟ್‌ಗೆ 158
ರಾಬಿನ್ ಉತ್ತಪ್ಪ ಸಿ ಘೋಷ್ ಬಿ ಉಪಾಧ್ಯಾಯ 8, ಮಾಯಾಂಕ್ ಅಗರ್‌ವಾಲ್ ಬಿ ಅನುರೀತ್ 19, ವಿನಯಕುಮಾರ್ ಸಿ ರಾವತ್ ಬಿ ಉಪಾಧ್ಯಾಯ 8, ಕೆ.ಎಲ್. ರಾಹುಲ್ ಸಿ ಅಂಡ್ ಬಿ ಸೈನಿ 38, ಮನೀಷ್ ಪಾಂಡೆ ಸಿ ರಾವತ್ ಬಿ ಅನುರೀತ್ 1, ಗಣೇಶ್ ಸತೀಶ್ ಸಿ ರಾವತ್ ಬಿ ಉಪಾಧ್ಯಾಯ 2, ಕರುಣ್ ನಾಯರ್ ಅಜೇಯ 53, ಕುನಾಲ್ ಕಪೂರ್ ಅಜೇಯ 24. ಇತರೆ: (ವೈ-4, ನೋಬಾಲ್-1) 5.
ವಿಕೆಟ್ ಪತನ: 1-21, 2-36, 3-36, 4-37, 5-47, 6-113.
ಬೌಲಿಂಗ್ ವಿವರ: ಅನುರೀತ್ ಸಿಂಗ್ 9-1-41-2, ಕೃಷ್ಣಕಾಂತ್ ಉಪಾಧ್ಯಾಯ 9-2-30-3, ಕರಣ್ ಶರ್ಮಾ 12-0-51-0, ಅಮಿತ್ ಮಿಶ್ರಾ 3-0-6-0, ಆಶಿಶ್ ಯಾದವ್ 5-0-13-0, ಚಂದ್ರಪಾಲ್ ಸೈನಿ 5-0-17-1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement