ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಹಾರಾಷ್ಟ್ರಕ್ಕೆ ಅಭೂತಪೂರ್ವ ಜಯ

Vishwanath S
Updated On : 17 Mar 2014, 1:20 am

ಡಿ.ಎನ್. ಮಹೇಂದ್ರ
ಮೈಸೂರು:
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಬಂಗಾಳ ಹಾಕಿ ತಂಡದ ವಿರುದ್ಧ ಮಹಾರಾಷ್ಟ್ರ ತಂಡ 9-0 ಅಂತರದಿಂದ ಜಯಗಳಿಸಿತು.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ನಡೆಯುತ್ತಿರುವ ಎ ವಿಭಾಗದ ಸಿ ಗುಂಪಿನ ಪಂದ್ಯಾವಳಿಯಲ್ಲಿ ನಾಲ್ಕು ಪೆನಾಲ್ಟಿ ಕಾರ್ನರ್‌ನ ಲಾಭ ಪಡೆದ ಹಾಕಿ ಮಹಾರಾಷ್ಟ್ರದ ಐಶ್ವರ್ಯ ಚೌಹಾಣ್, ಅಲಕ್ಷಾನಂದ ಬಗಡೆ ಮತ್ತು ಪೂಜಾ ಭೊಯರ್ ಅವರು ತಲಾ 2 ಗೋಲ್ ಬಾರಿಸಿ ತಂಡಕ್ಕೆ ನೆರವಾದರು. ಐಶ್ವರ್ಯ ಚೌಹಾಣ್ ಪಂದ್ಯದ 7ನೇ ನಿಮಿಷದಲ್ಲಿ ಮತ್ತು 26ನೇ ನಿಮಿಷದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ನ ಲಾಭ ಪಡೆದು ಎರಡು ಗೋಲ್ ಬಾರಿಸಿದರು.
ಅಂತೆಯೇ ಅಲಕ್ಷಾನಂದ ಬಗಡೆ 34, 37 ಮತ್ತು ಪೂಜಾ ಭೊಯರ್ 35 ಮತ್ತು 64 (ಪೆನಾಲ್ಟಿ ಕಾರ್ನರ್) ನಿಮಿಷದಲ್ಲಿ ಚಂಡು ಗೋಲ್ ಮನೆ ಪ್ರವೇಶಿಸುವಂತೆ ಮಾಡಿದರು. ಅಂತೆಯೇ ಸ್ನೇಹಲ್ ಲಗಲಿ, ಪ್ರತೀಕ್ಷಾ ಹರ್ನೆ (ಪೆನಾಲ್ಟಿ ಕಾರ್ನರ್) ಮತ್ತು ಪೂಜಾ ಸಿಂಧೆ ತಲಾ ಒಂದೊಂದು ಗೋಲ್ ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ 4-0 ಅಂತರ, ದ್ವಿತೀಯಾರ್ಧದಲ್ಲಿ 9-0 ಅಂತರವನ್ನು ಮಹಾರಾಷ್ಟ್ರ ತಂಡ ಕಾಯ್ದುಕೊಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 19-0 ಅಂತರದಿಂದ ಸೋತಿದ್ದ ಬಂಗಾಳ, ಭಾನುವಾರ ಮಹಾರಾಷ್ಟ್ರ ವಿರುದ್ಧ ಸೋತು ಕಹಿ ಅನುಭವಿಸಿತು.
ಬಳಿಕ ನಡೆದ ಉತ್ತರ ಪ್ರದೇಶ ಮತ್ತು ಜಾರ್ಖಂಡ್ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾನಲ್ಲಿ ಅಂತ್ಯಗೊಂಡಿತು.    ಒಂದೊಂದು ಅಂಕ: ಉತ್ತರಪ್ರದೇಶ ತಂಡದ ಚಾಂದ್ ಖಾನ್ ಎರಡು ಗೋಲ್ ಬಾರಿಸಿದರೆ, ಜಾರ್ಖಂಡ್‌ನ ರಂಜೀತ ಮಿಂಜ್ ಮತ್ತು ಕಾಂತಿ ಪ್ರಧಾನ್ ಅವರು ತಲಾ ಒಂದೊಂದು ಗೋಲ್ ಬಾರಿಸಿದರು. ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಉಭಯ ತಂಡಗಳೂ ತಲಾ ಒಂದೊಂದು ಅಂಕ ಪಡೆದವು. ದಿನದ ಮೂರನೆ ಪಂದ್ಯದಲ್ಲಿ ಎ ಗುಂಪಿನ ಸಾಯ್ ಹಾಕಿ ತಂಡವು, ರಾಜಸ್ಥಾನ ತಂಡವನ್ನು 10-0 ಅಂತರದಿಂದ ಮಣಿಸಿತು. ಮನಿಶಾ ನಾಲ್ಕು ಗೋಲ್ ಮತ್ತು ಮಮತಾ 3 ಗೋಲ್ ಬಾರಿಸಿ ತಂಡಕ್ಕೆ ಆಸರೆಯಾದರು. ಪಂದ್ಯ ಆರಂಭದ 16ನೇ ನಿಮಿಷದಲ್ಲಿಯೇ ದೀಪ್ತಿ ತನಗೆ ದೊರೆತ ಪೆನಾಲ್ಟಿ ಸ್ಟ್ರೋಕ್‌ನ ನೆರವು ಪಡೆದು ಮೊದಲ ಗೋಲ್ ಮೂಲಕ ತಂಡದ ಖಾತೆ ತೆರೆದರು. ಮನಿಶಾ 38, 39, 44, 45ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಮಮತಾ 19, 61 ಮತ್ತು 63ನೇ ನಿಮಿಷದಲ್ಲಿ ಅತ್ಯದ್ಭುತ ಗೋಲ್ ದಾಖಲಿಸಿದರು. ಉಳಿದಂತೆ ಲಕ್ಷ್ಮೀದೇವಿ ಮತ್ತು ಸಂಗೀತ ರೊಸ್ ಕುಲ್ಲು ತಲಾ ಒಂದೊಂದು ಗೋಲ್ ಬಾರಿಸಿದರು.ಹರಿಯಾಣಕ್ಕೆ ವಿಜಯ: ದಿನದ ಕಡೆಯ ಪಂದ್ಯದಲ್ಲಿ ತಮಿಳುನಾಡು ತಂಡದ ವಿರುದ್ಧ ಹಾಕಿ ಹರಿಯಾಣ ತಂಡ 14-0 ಅಂತರದಲ್ಲಿ ಜಯಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement