ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೊಕೊಗೆ ಪ್ರಶಸ್ತಿ, ರೋಜರ್ ರನ್ನರ್ ಅಪ್

Mainashree
Updated On : 17 Mar 2014, 10:01 am

ಇಂಡಿಯಾನ ವೆಲ್ಸ್: ವಿಶ್ವದ ನಂಬರ್ 2 ಆಟಗಾರ ನೊವಾಕ್ ಜೊಕೊವಿಚ್ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸುವ ಮೂಲಕ ಇಂಡಿಯಾನ ವೆಲ್ಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಇನ್ನು ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್, ತಮ್ಮ ಎದುರಾಳಿ ರೋಜರ್ ಫೆಡರರ್ ವಿರುದ್ಧ 3-6, 6-3, 7-6 (7/3) ರೋಚಕ ಗೆಲವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜೊಕೊವಿಚ್ 2014ರ ಸಾಲಿನಲ್ಲಿ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ತೀವ್ರ ಕುತೂಹಲದಿಂದ ಕೂಡಿದ್ದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದ ಪರಿಣಾಮ ಪಂದ್ಯ ಅಂತಿಮದ ಕ್ಷಣದವರೆಗೂ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿತ್ತು.
ಪಂದ್ಯದ ಆರಂಭದಲ್ಲಿ ಫೆಡರರ್ ಉತ್ತಮ ಆರಂಭ ಪಡೆದರು. ಈ ಮೂಲಕ ಫೆಡರರ್ 6-3 ಅಂತರದಲ್ಲಿ ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್‌ನಲ್ಲಿ ಹೋರಾಟ ನಡೆಸಿದ ಜೊಕೊವಿಚ್, 6-3 ಅಂತರದಲ್ಲಿ ಮುನ್ನಡೆ ಪಡೆದು ಸೆಟ್‌ಗಳ ಅಂತರವನ್ನು ಸಮಗೊಳಿಸಿಕೊಂಡರು. ಇನ್ನು ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಆದರೆ ಅಂತಿಮವಾಗಿ  ಜೊಕೊವಿಚ್ 7-6 (7/3) ಅಂತರದ ಮುನ್ನಡೆ ಪಡೆದು ಗೆಲವಿನ ನಗೆ ಬೀರಿದರು.
ಈ ವರ್ಷ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ಹೆಚ್ಚಿನ ಸಂತೋಷ ನೀಡಿದೆ. ನಾನು ಮೂರ್ನಾಲ್ಕು ಪಂದ್ಯಗಳಲ್ಲಿ ಮೂರು ಸೆಟ್‌ಗಳ ಆಟವನ್ನು ಆಡಿದೆ. ಅದರಲ್ಲಿ ಒಂದು ಸೆಟ್ ಹಿನ್ನಡೆ ಅನುಭವಿಸಿದ ನಂತರವೂ ಗೆಲವು ದಾಖಲಿಸಿದ್ದೆ. ಹಾಗಾಗಿ ಈ ಪಂದ್ಯದಲ್ಲಿ ನಾನು ಹೆಚ್ಚಿನ ವಿಶ್ವಾಸದೊಂದಿಗೆ ಆಡಲು ನೆರವಾಯಿತು ಎಂದು ಜೊಕೊವಿಚ್ ತಿಳಿಸಿದ್ದಾರೆ.
ನಾನು ಸರ್ವ್ ಮಾಡುವಾಗ ಫೆಡರರ್ ಉತ್ತಮ ಆಟ ಪ್ರದರ್ಶಿಸಿದರು. ನಂತರ ನಾನು ಎಚ್ಚರಿಕೆಯ ಆಟ ಪ್ರದರ್ಶಿಸಿ, ಫೆಡರರ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದೆ. ಪಂದ್ಯದಲ್ಲಿ ಮೊದಲ ಅಂಕದಿಂದ ಕೊನೆಯ ಅಂಕದವರೆಗೂ ನನ್ನ ಪಾಲಿಗೆ ಉತ್ತಮ ಅನುಭವ ನೀಡಿತು.
ಮೂರನೇ ಸೆಟ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಸೆಟ್ ಅನ್ನು ಬ್ರೆಕ್ ಪಾಯಿಂಟ್‌ವರೆಗೂ ಕೊಂಡೊಯ್ಯಲು ಉತ್ತಮ ಪ್ರಯತ್ನ ನಡೆಸಿದೆ. ಮೊದಲ ಸರ್ವ್‌ನಿಂದ ನಾನು ಬೆಸಿಕ್‌ಗೆ ಹೆಚ್ಚು ಮಹತ್ವ ನೀಡಿದೆ ಎಂದು ಫೆಡರರ್ ತಿಳಿಸಿದರು.
ಪಂದ್ಯದ ವೇಳೆ ಗಾಳಿಯ ವೇಗ ಹೆಚ್ಚಿದ್ದರಿಂದ ಜೊಕೊ ಅದರ ಲಾಭವನ್ನು ಚೆನ್ನಾಗಿ ಬಳಸಿಕೊಂಡರು. ಆದರೆ ಪಂದ್ಯದ ಅಂತಿಮದಲ್ಲಿ ರೋಚಕತೆಯಿಂದ ಕೂಡಿದ್ದು, ಉತ್ತಮವಾಗಿತ್ತು. ಈ ವೇಳೆ ನಾನು ಕೆಲವು ತಪ್ಪುಗಳನ್ನು ಎಸಗಿದ್ದು ಪಂದ್ಯ ಕೈಜಾರುವಂತಾಯಿತು ಎಂದು ಫೆಡರರ್ ತಿಳಿಸಿದರು.
ಪೆನ್ನೆಟ್ಟಾಗೆ ಪ್ರಶಸ್ತಿ: ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ ತಮ್ಮ ಎದುರಾಳಿ ಅಗ್ನೆಸ್ಕಾ ರಾಡ್ವಾಂಸ್ಕಾ ವಿರುದ್ಧ ಗೆಲವು ದಾಖಲಿಸುವ ಮೂಲಕ, ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ರಾಡ್ವಾಂಸ್ಕಾ ಮಂಡಿ ನೋವಿನಿಂದ ಬಳಲುತ್ತಿದ್ದ ಪರಿಣಾಮ ಆಕೆ ಹಿನ್ನಡೆ ಅನುಭವಿಸುವಂತಾಯಿತು. ಇದರ ಲಾಭ ಪಡೆದ ಪೆನ್ನೆಟ್ಟಾ 6-2, 6-1 ನೇರ ಸೆಟ್‌ಗಳ ಗೆಲವು ದಾಖಲಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಡ್ವಾಂಸ್ಕಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪೆನ್ನೆಟ್ಟಾ ಮೊದಲ ಸೆಟ್‌ನಲ್ಲಿ 6-2 ಅಂತರದ ಮುನ್ನಡೆ ಕಂಡುಕೊಂಡರು. ನಂತರ ಎರಡನೇ ಸೆಟ್‌ನಲ್ಲೂ ಅದೇ ಪ್ರದರ್ಶನ ಮುಂದುವರಿಸಿದ ಫ್ಲಾವಿಯಾ 6-1 ಅಂತರದ ಮೇಲುಗೈ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement