ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟಿ20ಗೆ ವಿದಾಯ ಹೇಳಲು ಮನ ಮಾಡಿದ ಜಯವರ್ದನೆ

Mainashree
Updated On : 17 Mar 2014, 10:01 am

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತುಣುಕು ಕ್ರಿಕೆಟ್ ವಿಶ್ವಕಪ್ ನಂತರ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ, ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಭಾನುವಾರಷ್ಟೇ ಪ್ರಕಟಿಸಿದ್ದರು. ಈಗ ಅದೇ ದೇಶದ ಇನ್ನೊಬ್ಬ ಆಟಗಾರ ಮಹೇಲ ಜಯವರ್ದನೆ ಅವರ ಸರದಿ. ಟಿ20 ವಿಶ್ವಕಪ್ ನಂತರ ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲು ಅವರು ಮನಮಾಡಿದ್ದಾರೆ. ಐಸಿಸಿ ಟ್ವಿಟರ್ ಮಿರರ್ ಆಂದೋಲನದ ಮೂಲಕ ಜಯವರ್ದನೆ ಅವರು ವಿದಾಯದ ವಿಷಯ ತಿಳಿಸಿದ್ದಾರೆ.
'2014ರ ಟಿ20 ವಿಶ್ವಕಪ್ ನಂತರ ಟಿ20 ಕ್ರಿಕೆಟ್‌ನಿಂದ ಮಹೇಲ ಜಯವರ್ದನೆ ಸಹ ನಿವೃತ್ತಿ ಪಡೆಯಲಿದ್ದು, ಕುಮಾರ ಸಂಗಕ್ಕಾರ ಹಾದಿ ಹಿಡಿದಿದ್ದಾರೆ' ಎಂದು ಸಂಗಕ್ಕಾರ ಮತ್ತು ಜಯವರ್ದನೆ ಕೊನೆ ಟಿ20 ವಿಶ್ವಕಪ್ ಆಡುತ್ತಿರುವ ಸಂದೇಶ ಹಿಡಿದಿರುವ ಫೋಟೋದೊಂದಿಗೆ ಐಸಿಸಿ ಟ್ವೀಟರ್‌ನಲ್ಲಿ ತಿಳಿಸಿದೆ.  36 ವರ್ಷದ ಜಯವರ್ದನೆ ಅವರು ಇದುವರೆಗೂ ನಡೆದಿರುವ ನಾಲ್ಕು ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಈಗ 5ನೇ ವಿಶ್ವಕಪ್ ಪಂದ್ಯಾವಳಿಯೊಂದಿಗೆ ತುಣುಕು ಮಾದರಿಯ ಕ್ರಿಕೆಟ್‌ಗೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾಗಿರುವ ಜಯವರ್ದನೆ ತೀರ್ಮಾನಿಸಿದ್ದಾರೆ.
ಇದುವರೆಗೂ 49 ಟಿ20 ಪಂದ್ಯಗಳನ್ನಾಡಿರುವ ಜಯವರ್ದನೆ ಅವರು 31.78 ಸರಾಸರಿಯಲ್ಲಿ 1335 ರನ್ ಗಳಿಸಿದ್ದಾರೆ. ಅಲ್ಲದೆ, ಪ್ರಸ್ತುತ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೀಲಂಕಾ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನೂ ಹೌದು. 64 ಪಂದ್ಯಗಳಿಂದ 1959 ರನ್ ಗಳಿಸಿರುವ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಂ ಅವರು ಮೊದಲ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಕೆಲವೇ ಕೆಲ ಬ್ಯಾಟ್ಸ್‌ಮನ್‌ಗಳಲ್ಲಿ ಜಯವರ್ದನೆ ಸಹ ಒಬ್ಬರು. ಜಿಂಬಾಬ್ವೆ ವಿರುದ್ಧ 2010ರಲ್ಲಿ ಗಯಾನದಲ್ಲಿ ನಡೆದ ಪಂದ್ಯದಲ್ಲಿ ಅವರು ಶತಕ ಸಿಡಿಸಿದ್ದರು. ಅಲ್ಲದೆ 8 ಅರ್ಧ ಶತಕಗಳನ್ನು ಅವರು ಗಳಿಸಿದ್ದಾರೆ.
ಜಯವರ್ಧನೆ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಸೌಥ್‌ಹ್ಯಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಅಲ್ಲದೆ, ಐಪಿಎಲ್ ಕ್ರಿಕೆಟ್‌ನ ಕಳೆದ ಆವೃತ್ತಿಯಲ್ಲಿ ಅವರು ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ಈ ವರ್ಷ ನಡೆದ ಹರಾಜಿನಲ್ಲಿ ಅವರನ್ನು ಖರೀದಿಸಲು ಯಾವುದೇ ತಂಡ ಮುಂದಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement