ಪಾಕ್ಗೆ ಕಿವೀಸ್ ಸುಲಭ ತುತ್ತು
ಮೀರ್ಪುರ: ಬೌಲರ್ಗಳ ಮಾರಕ ದಾಳಿ ಹಾಗೂ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸುಲಭ ಗೆಲವು ದಾಖಲಿಸಿದೆ.
ಸೋಮವಾರ ಇಲ್ಲಿನ ಶೇರೆ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವು 6 ವಿಕೆಟ್ಗಳ ಅಂತರದಲ್ಲಿ ಕಿವೀಸ್ ತಂಡವನ್ನು ಮಣಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ನಾಯಕ ಬ್ರೆಂಡನ್ ಮೆಕಲಂ(ಅಜೇಯ 59) ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ಗೆ 145 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಕಮ್ರಾನ್ ಅಕ್ಮಲ್(52) ಹಾಗೂ ಮೊಹಮದ್ ಹಫೀಜ್(55) ಅರ್ಧಶತಕದ ನೆರವಿನಿಂದ 19.5 ಓವರ್ಗಳಲ್ಲಿ 4 ವಿಕೆಟ್ಗೆ 149 ರನ್ ದಾಖಲಿಸುವ ಮೂಲಕ ಗೆಲವಿನ ದಡ ಸೇರಿತು. ಈ ಮೂಲಕ ಪಾಕಿಸ್ತಾನ ತಂಡ ತಮ್ಮ ಉತ್ತಮ ಫಾರ್ಮ್ನಲ್ಲಿ ಮುಂದುವರಿದಿದೆ.
ಬ್ರೆಂಡನ್ ಹೋರಾಟ: ಪಾಕಿಸ್ತಾನಕ್ಕೆ ಬೃಹತ್ ಗುರಿಯನ್ನು ನೀಡುವ ನಿಟ್ಟಿನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಕಿವೀಸ್ ಪಡೆ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡಲಿಲ್ಲ.
ತಂಡದ ಪರ ನಾಯಕ ಬ್ರೆಂಡನ್ ಮೆಕಲಂ(ಅಜೇಯ 59 ರನ್, 45 ಎಸೆತ, 3 ಬೌಂಡರಿ, 4 ಸಿಕ್ಸರ್) ಮಾತ್ರ ಹೋರಾಟದ ಬ್ಯಾಟಿಂಗ್ ನಡೆಸಿದರು. ಹಾಗಾಗಿ ತಂಡ 140ರ ಗಡಿ ದಾಟಲು ನೆರವಾಯಿತು. ಉಳಿದಂತೆ ಆರಂಭಿಕ ಮಾರ್ಟೀನ್ ಗುಪ್ಟಿಲ್(11) ಹಾಗೂ ಕೊಲಿನ್ ಮುನ್ರೊ(20) ಹೊರತಾಗಿ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ಗಡಿ ದಾಟಲಿಲ್ಲ.
ಪಾಕಿಸ್ತಾನದ ಪರ ಉಮರ್ ಗುಲ್ 16ಕ್ಕೆ3, ಮೊಹಮದ್ ತಲ್ಲಾ 22ಕ್ಕೆ2 ವಿಕೆಟ್ ಪಡೆದು ಮಿಂಚಿದರು.
ಸುಲಭ ಜಯ: ಕಿವೀಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಯಾವುದೇ ಹಂತದಲ್ಲೂ ತೊಂದರೆ ಎದುರಾಗಲಿಲ್ಲ.
ಆರಂಭಿಕ ಕಮ್ರಾನ್ ಅಕ್ಮಲ್(52ರನ್, 45 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕ ದಾಖಲಿಸುತ್ತಿದ್ದಂತೆ ನಿವೃತ್ತಿ ಪಡೆದು ಪೆವಿಲಿಯನ್ಗೆ ಮರಳಿದರು. ಇನ್ನು ಮತ್ತೋರ್ವ ಆರಂಭಿಕ ಶರ್ಜೀಲ್ ಖಾನ್ 12 ರನ್ಗೆ ಪೆವಿಲಿಯನ್ ಸೇರಿಕೊಂಡರು. ಇನ್ನು ನಾಯಕ ಮೊಹಮದ್ ಹಫೀಜ್(55 ರನ್, 39 ಎಸೆತ, 3 ಬೌಂಡರಿ, 5 ಸಿಕ್ಸರ್) ಅಬ್ಬರದ ಅರ್ಧಶತಕ ದಾಖಲಿಸಿದರು.
ಉಳಿದಂತೆ ಉಮರ್ ಅಕ್ಮಲ್ 3 ರನ್ಗಳಿಸಿ ಔಟಾದರೆ, ಶೊಹೆಬ್ ಮಲಿಕ್ (8), ಶೋಹೆಬ್ ಮಕ್ಸೂದ್(18) ಅಜೇಯರಾಗುಳಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ಗೆ 145 (ಬ್ರೆಂಡನ್ ಮೆಕಲಂ ಅಜೇಯ 59, ಕೊಲಿನ್ ಮುನ್ರೊ 20, ಉಮರ್ ಗುಲ್ 16ಕ್ಕೆ3)
ಪಾಕಿಸ್ತಾನ 19.5 ಓವರ್ಗಳಲ್ಲಿ 4 ವಿಕೆಟ್ಗೆ 149 ರನ್
(ಮೊಹಮದ್ ಹಫೀಜ್ 55, ಕಮ್ರಾನ್ ಅಕ್ಮಲ್ 52, ನಾಥನ್ ಮೆಕಲಂ 21ಕ್ಕೆ2)