ಟೀಂ ಇಂಡಿಯಾಗೆ ಕೊನೇ ತಾಲೀಮು
ಭಾರತ
ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.
ಇಂಗ್ಲೆಂಡ್
ಸ್ಟುವರ್ಟ್ ಬ್ರಾಡ್ (ನಾಯಕ), ರವಿ ಬೋಬರಾ, ಟಿಮ್ ಬ್ರೆಸ್ನಾನ್, ಜೋಸ್ ಬಲ್ಟರ್, ಜಡೇ ಡರ್ನ್ಬ್ಯಾಷ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡಾನ್, ಮಿಚೆಲ್ ಲುಂಬ್, ಮೋಯಿನ್ ಅಲಿ, ಇಯಾನ್ ಮಾರ್ಗನ್, ಸ್ಟೆಫೆನ್ ಪೆರ್ರಿ, ಜಾಯ್ ರೂಟ್, ಬೆನ್ ಸ್ಟೋಕ್ಸ್, ಜೇಮ್ಸ್ ಟ್ರೆಡ್ವೆಲ್, ಲ್ಯೂಕ್ ರೈಟ್.
ಔಮೀರ್ಪುರ: ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನುಭವಿಸುವ ಮೂಲಕ ವಿಶ್ವಾಸ ಕುಂದಿರುವ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ತನ್ನ ಎರಡನೇ ಮತ್ತು ಅಂತಿಮ ಅಭ್ಯಾಸ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಭಾರತ ತಂಡ ಶುಕ್ರವಾರ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಅದಕ್ಕೆ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮೂಲಕ ತನ್ನ ಆತ್ಮ ವಿಶ್ವಾಸ ವೃದ್ಧಿಸಿಕೊಳ್ಳುವ ಅಗತ್ಯವಿದೆ.
ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ ನಾಯಕತ್ವದ ಪಡೆ ಕೇವಲ 5 ರನ್ಗಳ ಅಂತರದಿಂದ ಪರಾಭವ ಹೊಂದಿತ್ತು. ಲಂಕಾ ವಿರುದ್ಧ ಭಾರತದ ಯಾವುದೇ ಬ್ಯಾಟ್ಸ್ಮನ್ಗಳು ಸ್ಫೋಟಕ ಬ್ಯಾಟಿಂಗ್ ನಡೆಸದಿರುವುದು ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು. ಆದರೆ, ತಂಡಕ್ಕೆ ಮರಳಿದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರು ಕೊಂಚ ತಂಡಕ್ಕೆ ಆಶ್ರಯವಾಗಿದ್ದರು. ಆದರೆ, ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಂತೆಯೇ ಇಬ್ಬರೂ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಈಗ ಇಂಗ್ಲೆಂಡ್ ವಿರುದ್ಧ ಅದೇ ಇಬ್ಬರು ಬ್ಯಾಟ್ಸ್ಮನ್ಗಳು ಇನ್ನಷ್ಟು ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಬೇಕಾದ ಅಗತ್ಯವಿದೆ. ಆದರೆ, ಭರವಸೆಯ ಯುವ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಅವರು ತಂಡಕ್ಕೆ ದುಬಾರಿ ಎನಿಸಿದ್ದರು. ಸಚಿತ್ರಾ ಸೇನಾಯಕೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ರಹಾನೆ ತಂಡಕ್ಕೆ ತಕ್ಕ ಕೊಡುಗೆ ನೀಡುವಲ್ಲಿ ವೈಫಲ್ಯ ಕಂಡಿದ್ದರು. ಲಂಕಾ ವಿರುದ್ಧದ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಗಮನಿಸಿದಾಗ, ಆಂಗ್ಲರ ವಿರುದ್ಧದ ಹೋರಾಟಕ್ಕೆ, ವಿರಾಟ್ ಕೊಹ್ಲಿ, ಮಹೇಂದ್ರ ಸಂಗ್ ಧೋನಿ, ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರು ನೇರ ಆಯ್ಕೆಯಾಗಿದ್ದಾರೆ.ವಿರಾಟ್ ಕೊಹ್ಲಿ ತಂಡದ ಎಂದಿನ 3ನೇ ಕ್ರಮಾಂಕದ ಬ್ಯಾಟ್ಸ್ಮನ್ ಎನಿಸಿದ್ದರೂ, ಸುರೇಶ್ ರೈನಾ ಅವರು ಲಂಕಾ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಇನ್ನು ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ರನ್ಗಳಿಸಲು ಒದ್ದಾಡುತ್ತಿರುವುದು ತಂಡಕ್ಕೆ ಮತ್ತೊಂದು ಆತಂಕವಾಗಿ ಪರಿಣಮಿಸಿದೆ. ಒಂದು ವೇಳೆ ರಹಾನೆ ಅವರನ್ನು ಆರಂಭಿಕರನ್ನಾಗಿ ಅಂಗಣಕ್ಕಿಳಿಸಲು, ಶಿಖರ್ ಧವನ್ ಅಥವಾ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟರೂ ಅಚ್ಚರಿಪಡಬೇಕಿಲ್ಲ. ಆದರೆ, ರೋಹಿತ್ ಶರ್ಮಾ ಅವರ ಬೆನ್ನಿಗೆ ಧೋನಿ ಇರುವ ಹಿನ್ನೆಲೆಯಲ್ಲಿ, ಧವನ್ ಅವರು ರಹಾನೆಗಾಗಿ ಸ್ಥಾನ ಬಿಟ್ಟುಕೊಡುವ ಸಾಧ್ಯತೆಗಳಿವೆ.ರವಿಚಂದ್ರನ್ ಅಶ್ವಿನ್ ಮತ್ತು ರವಿಂದ್ರ ಜಡೇಜಾ ಅವರು ಇಬ್ಬರು ತಂಡದ ಪ್ರಮುಖ ಸ್ಪಿನ್ನರ್ಗಳಾಗಿದ್ದಾರೆ. ಅಲ್ಲದೆ, ಆಲ್ರೌಂಡ್ ಪ್ರದರ್ಶನ ನೀಡುತ್ತಿರುವ ಈ ಇಬ್ಬರು ಸ್ಪಿನ್ನರ್ಗಳು ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.
ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹ್ಮದ್ ಶಮಿ ಅವರು ಭಾರತದ ಅಗ್ರ ಬೌಲರ್ ಎನಿಸಿದ್ದಾರೆ. ಅವರೊಂದಿಗೆ ವರುಣ್ ಎರಾನ್ ಸಹ ತಕ್ಕ ಬೌಲಿಂಗ್ ಪ್ರದರ್ಶಿಸುತ್ತಿದ್ದು, ಭುವನೇಶ್ವರ ಕುಮಾರ್ಗಿಂತ ಶ್ರೇಷ್ಠ ಬೌಲರ್ ಎನಿಸಿದ್ದಾರೆ. ಇನ್ನು 15 ಜನ ಆಟಗಾರರಲ್ಲಿ ಮೊದಲ ಅಭ್ಯಾಸ ಪಂದ್ಯದಲ್ಲಿ ಫೀಲ್ಡ್ಗೆ ಇಳಿಯದಿರುವ ಬೌಲರ್ ಎಂದರೆ, ಮೋಹಿತ್ ಶರ್ಮಾ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅವರು ಅಂಗಣಕ್ಕಿಳಿಯು ನಿರೀಕ್ಷೆಗಳಿವೆ. ಆದರೆ, ಅಲ್ಲಿ ಉತ್ತಮ ಪ್ರದರ್ಶನ ನೀಡಿದಾಗ್ಯೂ, ಆಡುವ 11ರಲ್ಲಿ ಅವರಿಗೆ ಸ್ಥಾನ ಸಿಗುವುದು ಕಠಿಣ ವಿಷಯವಾಗಿದೆ. ಇನ್ನೊಂದು ಕುತೂಹಲದ ವಿಷಯವೆಂದರೆ, ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಈಗ ಯಾವ ರೀತಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು. ಮೊದಲ ಅಭ್ಯಾಸ ಪಂದ್ಯದಲ್ಲಿ ಕೀಪಿಂಗ್ ನಿರ್ವಹಿಸಿದ್ದ ನಾಯಕ ಧೋನಿ ಅವರು ಬ್ಯಾಟಿಂಗ್ಗೆ ಇಳಿದಿರಲಿಲ್ಲ.
ಇನ್ನೊಂದೆಡೆ ಇಂಗ್ಲೆಂಡ್ ತಂಡ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ನಾಯಕ ಸ್ಟುವರ್ಟ್ ಬ್ರಾಡ್ ಅವರು ಗಾಯದಿಂದ ಮೊಣಕಾಲು ನೋವಿನಿಂದ ನರಳುತ್ತಿರುವುದು ತಂಡದಲ್ಲಿ ಆತಂಕ ಉಂಟುಮಾಡಿದೆ. ಆದರೆ, ಲ್ಯೂಕ್ ರೈಟ್, ರವಿ ಬೋಪರಾ ಹಾಗೂ ಇಯಾನ್ ಮಾರ್ಗನ್ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾಗಿದ್ದಾರೆ.