ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಧ್ಯಪ್ರದೇಶಕ್ಕೆ ಮಣಿದ ಕರ್ನಾಟಕ

ಸಂಘಟನೆಯ ಕೊರತೆ ಮತ್ತು ಚೆಂಡನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸತತವಾಗಿ ವಿಫಲರಾದ ಕರ್ನಾಟಕ ತಂಡದ...

Mainashree
Updated On : 18 Mar 2014, 9:53 am

ಮೈಸೂರು: ಸಂಘಟನೆಯ ಕೊರತೆ ಮತ್ತು ಚೆಂಡನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸತತವಾಗಿ ವಿಫಲರಾದ ಕರ್ನಾಟಕ ತಂಡದ ಆಟಗಾರ್ತಿಯರು, ಮಧ್ಯಪ್ರದೇಶ ತಂಡದ ವಿರುದ್ಧ 8-1 ಅಂತರದಿಂದ ಸೋಲುವ ಮೂಲಕ ಆರಂಭಿಕ ಆಘಾತ ಅನುಭವಿಸಿದರು.
ಹಾಕಿ ಕರ್ನಾಟಕ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕ ತಂಡದ ನಿಹಾ ಪಂದ್ಯದ ಆರನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿದಾಗ ತಂಡದಲ್ಲಿ ಮತ್ತು ನೆರೆದಿದ್ದ ಪ್ರೇಕ್ಷಕರಲ್ಲಿ ಉತ್ಸಾಹ ಮುಗಿಲು ಮಟ್ಟಿತ್ತು. ಪಂದ್ಯ ಕರ್ನಾಟಕದ ಕೈ ವಶವಾದಂತೆಯೇ ಎಂದು ಭೀಗುವ ಮನಸ್ಥಿತಿಯಲ್ಲಿ ಎಲ್ಲರೂ ಇದ್ದರು. ಆದರೆ ಪಂದ್ಯದ 10ನೇ ನಿಮಿಷದಲ್ಲಿ ಮಧ್ಯಪ್ರದೇಶ ತಂಡದ ನಾಯಕಿ ಪ್ರಿಯಾಂಕ ವಾಂಖೆಡೆ ಬಾರಿಸಿದ ಗೋಲು ಎಲ್ಲರ ಉತ್ಸಾಹಕ್ಕೂ ತಣ್ಣೀರು ಎರಚಿತು.
ಮಧ್ಯಪ್ರದೇಶದ ಪರ ದಾಖಲಾದ 8 ಗೋಲುಗಳಲ್ಲಿ ನಾಯಕಿ ಪ್ರಿಯಾಂಕ ಹ್ಯಾಟ್ರಿಕ್ ಗೋಲ್ ಸೇರಿ ಒಟ್ಟು ಆರು ಗೋಲು ದಾಖಲಿಸಿದರು. ಉಳಿದೆರಡು ಗೋಲುಗಳನ್ನು ಪ್ರೀತಿ ದುಬೈ ಮತ್ತು ಎಚ್. ಲಲ್ರುಟ್‌ಫೆಲಿ ತಲಾ ಒಂದೊಂದು ಗೋಲು ಹಂಚಿಕೊಂಡರು. ಸಂಘಟನಾತ್ಮಕವಾಗಿ ಪ್ರತಿಸ್ಪರ್ಧಿಗಳನ್ನು ಮಣಿಸುವಲ್ಲಿ, ಚೆಂಡನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಚೆಂಡನ್ನು ಕೊಡುವಲ್ಲಿ ಕರ್ನಾಟಕ ತಂಡದ ಆಟಗಾರರು ವಿಫಲರಾದರು.
ಪಂದ್ಯದ ಮೊದಲಾರ್ಧದವರೆಗೂ ಕರ್ನಾಟಕ ಪರ ಗೋಲ್ ಕೀಪರ್ ಆಗಿದ್ದ ಎ.ಬಿ. ಧಮಯಂತಿ ಹಲವು ಹೊಡೆತಗಳನ್ನು ಎದುರಿಸುವಲ್ಲಿ ವಿಫಲರಾದರು. ಮೊದಲಾರ್ಧ ಮುಗಿಯುವುದು ಐದು ನಿಮಿಷ ಇರುವಾಗ ಅಂಗಳಕ್ಕಿಳಿದ ಎನ್.ಎನ್. ನಿಶಾ ಗೋಲು ಆಗುತ್ತಿದ್ದ ಮೂರು ಹೊಡೆತಗಳನ್ನು ತಡೆದರು. ಆದರೂ ನಿಶಾ ಎರಡು ಗೋಲು ತಡೆಯುವಲ್ಲಿ ವಿಫಲರಾದರು. ಪಂದ್ಯದ ಮೊದಲಾರ್ಧದಲ್ಲಿ 6-1 ಮತ್ತು ದ್ವಿತೀಯಾರ್ಧದಲ್ಲಿ 8-1 ಅಂತರ ತಲುಪಿತು.
ಮತ್ತೊಂದು ಪಂದ್ಯದಲ್ಲಿ ಒಡಿಶಾ ತಂಡವು, ಬಿಹಾರ ತಂಡವನ್ನು 15-0 ಅಂತರದಲ್ಲಿ ಮಣಿಸಿತು. ಎಲಿಮ ಮಿಂಜ್ ಐದು ಗೋಲು ಬಾರಿಸಿ ತಂಡಕ್ಕೆ ಆಸರೆಯಾದರೆ, ಪ್ರಿಯಾಂಕ 3 ಗೋಲು, ಮರಿಯಾನ ಕುಜೂರ್ 2 ಗೋಲು ಬಾರಿಸಿದರು. ಉಳಿದಂತೆ ನಾಯಕಿ ಅಂಬಿಕ ಟೊಪ್ಪೊ, ದೊಮ್ನಿಕ ಕುಜೂರ್, ರಶ್ಮಿತ ಮಿಂಜ್, ಪ್ರಿಯಾಂಕ ಕುಜೂರ್ ಮತ್ತು ಮಂಜು ಲಾಕ್ರ ತಲಾ ಒಂದು ಗೋಲು ದಾಖಲಿಸಿದರು. ಪಂದ್ಯದ ಮೊದಲಾರ್ಧದಲ್ಲಿ 8 ಗೋಲು ದಾಖಲಿಸಿದ್ದ ಒಡಿಶಾ ತಂಡ, ದ್ವಿತೀಯಾರ್ಧದ ಅಂತ್ಯಕ್ಕೆ 15 ಗೋಲು ಬಾರಿಸಿತು.
ದಿನದ ದ್ವಿತೀಯ ಪಂದ್ಯದಲ್ಲಿ ದೆಹಲಿ ತಂಡವು, ಭೂಪಾಲ್ ತಂಡದ ವಿರುದ್ಧ 4-0 ಅಂತರದಿಂದ ಸೋತಿತು. ಭೂಪಾಲ್ ತಂಡದ ಚಂದಗುಪ್ತ ಮೂರು ಗೋಲು ಮತ್ತು ಅನ್ನು ಗುರಂಗ್ ಒಂದು ಗೋಲು ದಾಖಲಿಸಿದರು. ಚಂದಗುಪ್ತ ಅವರು ಹೊಡೆದ ಮೂರೂ ಗೋಲುಗಳೂ ಪೆನಾಲ್ಟಿ ಕಾರ್ನರ್‌ನಿಂದ ಬಂದಿದ್ದು ಎಂಬುದು ವಿಶೇಷ.
ಮತ್ತೊಂದು ಪಂದ್ಯದಲ್ಲಿ ಮುಂಬೈ ಹಾಕಿ ತಂಡವನ್ನು ಪಂಜಾಬ್ ತಂಡ 2-1 ಅಂತರದಿಂದ ಪರಾಭವಗೊಳಿಸಿತು. ಪಂಜಾಬ್ ತಂಡದ ಜಸ್‌ಪ್ರೀತ್ ಕೌರ್ ಮತ್ತು ರಾಜ್ವಿಂಡರ್ ತಲಾ ಒಂದು ಗೋಲು ಬಾರಿಸಿದರು. ಇತ್ತ ಮುಂಬೈ ಪರ ಪ್ರಾಂಜಲಿ ಪಾಟೀಲ್ ಪೆನಾಲ್ಟಿ ಕಾರ್ನರ್‌ನ ಲಾಭಪಡೆದು ಒಂದು ಗೋಲು ಬಾರಿಸಿದರು.
ಪಂದ್ಯ ಹದಿಮೂರು- ಮಧ್ಯಪ್ರದೇಶ ವಿರುದ್ಧ ಕರ್ನಾಟಕಕ್ಕೆ ಸೋಲು- 8-1
ಮಧ್ಯಪ್ರದೇಶ ಗೋಲು ಸ್ಕೋರ್
ಪ್ರಿಯಾಂಕ ವಾಂಖೆಡೆ- 10, 14, 28, 34, 41, 53ನಿ.
ಪ್ರೀತಿ ದುಬೈ- 15ನಿ.
ಎಚ್. ಲಲ್ರುಟ್‌ಫೆಲಿ- 33ನಿ.
ಕರ್ನಾಟಕ ಗೋಲು ಸ್ಕೋರ್
ನಿಹಾ- 6ನಿ.
ಪಂದ್ಯ ಹದಿನಾಲ್ಕು- ದೆಹಲಿ ಮಣಿಸಿದ ಭೂಪಾಲ್- 4-0
ಭೂಪಾಲ್ ಗೋಲು ಸ್ಕೋರ್
ಚಾಂದ ಗುಪ್ತ- 9, 47, 60ನಿ.
ಅನ್ನು ಗುರಂಗ್- 49ನಿ.
ಪಂದ್ಯ ಹದಿನೈದು- ಮುಂಬೈ ಮಣಿಸಿದ ಪಂಜಾಬ್
ಪಂಜಾಬ್ ಗೋಲು ಸ್ಕೋರ್
ಜಸ್ಪ್ರೀತ್- 1ನಿ.
ರಾಜ್‌ಬೀರ್ ಕೌರ್- 46ನಿ.
ಮುಂಬೈ ಗೋಲು ಸ್ಕೋರ್
ಪ್ರನಾಲಿ ಪಾಟೀಲ್- 40ನಿ.
ಪಂದ್ಯ ಹದಿನಾರು- ಬಿಹಾರ ಮಣಿಸಿದ ಒಡಿಶಾ 15-0
ಎಲಿಮ ಮಿಂಜ್- 3, 15, 20, 35, 45ನಿ.
ಅಂಬಿಕ ಟೊಪ್ಪೊ- 15ನಿ.
ದೊಮ್ನಿಕ ಕುಜೂರ್- 25ನಿ.
ರಶ್ಮಿತ ಮಿಂಜ್- 32ನಿ.
ಪ್ರಿಯಾಂಕ ಎಕ್ಕ- 34, 51, 52ನಿ.
ಮರಿಯಾನ ಕುಜೂರ್- 36, 54ನಿ.
ಪ್ರಿಯಾಂಕ ಕುಜೂರ್- 50ನಿ.
ಮಂಜು ಲಾಕ್ರ- 59ನಿ.



ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement