ರಾಜ್ಯದ ಪ್ರೀತಿಗೆ ಗೆಲವು
ಮುಂಬೈ: ಅಗ್ರ ಶ್ರೇಯಾಂಕಿತೆ ಕರ್ನಾಟಕದ ಪ್ರೀತಿ ಉಜ್ಜಿನಿ ತಮ್ಮ ಉತ್ತಮ ಪ್ರದರ್ಶನ ನೀಡುವ ಮೂಲಕ ಖಾರ್ ಜಿಮ್ಕಾನಾ ಅಖಿಲ ಭಾರತ ಮಹಿಳೆಯರ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಗೆಲವು ದಾಖಲಿಸಿದ್ದಾರೆ.
ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪ್ರೀತಿ ತಮ್ಮ ಎದುರಾಳಿ ಮಹಾರಾಷ್ಟ್ರದ ಅನುಷ್ಕಾ ಸಾಥೆ ಅವರನ್ನು 6-2, 7-6 (8-6) ಸೆಟ್‌ಗಳ ಅಂತರದಲ್ಲಿ ಮಣಿಸಿದರು. ಪಂದ್ಯದಲ್ಲಿ ತೀವ್ರ ಪೈಪೋಟಿ ಇದ್ದ ಕಾರಣ ಪಂದ್ಯ ಹೆಚ್ಚು ರೋಚಕವಾಗಿತ್ತು. ಪಂದ್ಯದ ಆರಂಭದಿಂದಲೂ ಪ್ರೀತಿ ಎದುರಾಳಿಯ ಮೇಲೆ ನಿಯಂತ್ರಣ ಸಾಧಿಸಿದರು. ಹಾಗಾಗಿ ಮೊದಲ ಸೆಟ್ ಅನ್ನು 6-2 ಅಂತರದಲ್ಲಿ ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್‌ನಲ್ಲಿ ತೀವ್ರ ಹೋರಾಟ ಎದುರಾದ ಪರಿಣಾಮ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಈ ವೇಳೆ 7-6 (8-6) ಮುನ್ನಡೆ ಪಡೆದ ಪ್ರೀತಿ ಗೆಲವಿನ ನಗೆ ಬೀರಿದರು.
ಪ್ರೀತಿ ತಮ್ಮ ಮುಂದಿನ ಪಂದ್ಯದಲ್ಲಿ ಹರ್ಯಾಣದ ಸೃಷ್ಠಿ ದಂಡ ವಿರುದ್ಧ ಸೆಣೆಸಲಿದ್ದಾರೆ.